ತುಮಕೂರು: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ 66ನೇ ಹುಟ್ಟುಹಬ್ಬವನ್ನು ಮಂಗಳವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು. ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪನವರ ನೇತೃತ್ವದಲ್ಲಿ ಬೃಹತ್ ಕೇಕ್ ಕತ್ತರಿಸಿ, ಸಿಹಿ ವಿತರಿಸಿದರು. ಕುಮಾರಸ್ವಾಮಿಯವರ ಆರೋಗ್ಯ, ಆಯಸ್ಸು ವೃದ್ಧಿಯಾಗಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲೆಂದು ಪ್ರಾರ್ಥಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರು ಜಾರಿಗೆ ತಂದ ಜನ ಮೆಚ್ಚಿರುವ ಯೋಜನೆಗಳು, ರೈತರ ಸಾಲ ಮನ್ನಾ, ಸಾರಾಯಿ ನಿಷೇಧದಂತಹ ಕಾರ್ಯಕ್ರಮಗಳ ಮೂಲಕ ಅವರು ಜನಮಾನಸದಲ್ಲಿ ಉಳಿದಿರುವ ನಾಯಕರಾಗಿದ್ದಾರೆ. ಸಜ್ಜನಿಕೆ, ಸರಳ ವ್ಯಕ್ತಿತ್ವ, ವಿಕಲಚೇತನರು, ವಯೋವೃದ್ಧರು, ರೈತರು, ಬಡವರ ಬಗ್ಗೆ ಸ್ಪಂದಿಸುವ ಮಾತೃಹೃದಯ ಹೊಂದಿರುವ ಧೀಮಂತ ನಾಯಕ ಎಂದು ಹೇಳಿದರು.
ಇದನ್ನು ಓದಿ: ತುಮಕೂರು: ಜೆಸಿಐ ತುಮಕೂರು ಮೆಟ್ರೋ ಘಟಕದ 35ನೇ ವರ್ಷದ ಪದವಿ ಸ್ವೀಕಾರ ಸಮಾರಂಭ
ಕುಮಾರಸ್ವಾಮಿಯವರ ಜನಪ್ರಿಯತೆ, ಕಾರ್ಯವೈಖರಿ ಮೆಚ್ಚಿ ಪ್ರಧಾನಿ ಮೋದಿಯವರು ಬೃಹತ್ ಕೈಗಾರಿಕಾ ಖಾತೆ ನೀಡಿದ್ದು, ಕೈಗಾರಿಕಾ ಕ್ರಾಂತಿ ಮಾಡಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು ಶ್ರಮಿಸುತ್ತಿದ್ದಾರೆ. ದೇವೇಗೌಡರ ನಂತರ ಕುಮಾರಣ್ಣನವರು ರಾಷ್ಟ್ರ ಅಭಿವೃದ್ಧಿಯ ಹೊಣೆ ಹೊರುವ ಅವಕಾಶ ಪಡೆದದ್ದು ಕನ್ನಡಿಗರ ಹೆಮ್ಮೆ ಎಂದು ಆರ್.ಸಿ.ಆಂಜನಪ್ಪ ಹೇಳಿದರು.
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾತನಾಡಿ, ಅನೇಕ ಕುಟುಂಬಗಳ ನೆಮ್ಮದಿ ಹಾಳು ಮಾಡಿದ್ದ ಸಾರಾಯಿಯನ್ನು ಕುಮಾರಣ್ಣ ನಿಷೇಧ ಮಾಡಿ ಮೆಚ್ಚಿನ ನಾಯಕರಾದರು. ರೈತರ ಸಾಲ ಮನ್ನಾ ಮಾಡಿ ಅನ್ನದಾತರಿಗೆ ನೆರವಾದರು. ಗ್ರಾಮ ವಾಸ್ತವ್ಯ ಮಾಡಿ ಜನರ ಬಳಿಗೆ ಸರ್ಕಾರವನ್ನು ತೆಗೆದುಕೊಂಡು ಹೋಗಿ ಅವರ ಸಮಸ್ಯೆ ನಿವಾರಣೆಗೆ ಧ್ವನಿಯಾದರು. ಇಂತಹ ಅಪರೂಪದ ನಾಯಕ ಕುಮಾರಣ್ಣನವರ ಸೇವೆ ರಾಜ್ಯಕ್ಕೆ ಹೆಚ್ಚಿನ ಅಗತ್ಯವಿದೆ. ಅವರಿಗೆ ಆರೋಗ್ಯ, ಆಯುಷು, ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಹೆಚ್.ನಿಂಗಪ್ಪ ಸೋಲಾರ್ ಕೃಷ್ಣಮೂರ್ತಿ, ದಾಂಡೇಲಿ ಗಂಗಣ್ಣ, ಟಿ.ಎಲ್.ಕುಂಭಯ್ಯ, ಧರಣೇಂದ್ರಕುಮಾರ್, ಹೆಚ್.ಡಿ.ಕೆ.ಮಂಜುನಾಥ್, ಶ್ರೀನಿವಾಸ್ಪ್ರಸಾದ್, ಟಿ.ಜಿ.ನರಸಿಂಹರಾಜು, ಟಿ.ಹೆಚ್.ಬಾಲಕೃಷ್ಣ, ಮೋಹನ್ಕುಮಾರ್, ಜಿಲ್ಲಾ ಸೇವಾದಳ ಅಧ್ಯಕ್ಷ ಕೆಂಪರಾಜು, ರೇಖಾರಾಜು, ಮಧುಗೌಡ, ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
