ಶ್ಲೋಕ – 22
ಸ ತಯಾ ಶ್ರದ್ಧಯಾ ಯುಕ್ತಸ್ತಸ್ಯಾSರಾಧನಮೀಹತೇ ।
ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿ ತಾನ್ ॥೨೨॥
ಉಚ್ಚಾರಣೆ:- ಸಃ ತಯಾ ಶ್ರದ್ಧಯಾ ಯುಕ್ತಃ ತಸ್ಯ ಆರಾಧನಮ್ ಈಹತೇ ।
ಲಭತೇ ಚ ತತಃ ಕಾಮಾನ್ ಮಯಾ ಏವ ವಿಹಿತಾನ್ ಹಿ ತಾನ್-
ಅವನು ಶ್ರದ್ಧೆಯನ್ನೆ ಆತುಕೊಂಡು ಆಯಾ ದೇವತೆಗಳನ್ನು ಪೂಜಿಸತೊಡಗುತ್ತಾನೆ.
ಅದರ ಫಲವಾಗಿ ನಾನೇ ಈಡೇರಿಸಿದ ಆಯಾ ಬಯಕೆಗಳನ್ನು ಪಡೆಯುತ್ತಾನೆ.
ಮೇಲೆ ಹೇಳಿದ ಏಕಭಕ್ತಿಯನ್ನು ಪಾಲಿಸದೆ ಯಾವುದೋ ಒಂದು ದೇವತೆಯನ್ನು ಅಚಲವಾಗಿ ಪೂಜಿಸಿ ಫಲ ಪಡೆಯವವರನ್ನು ಪ್ರಪಂಚದಲ್ಲಿ ಕಾಣುತ್ತೇವೆ.
ಇಲ್ಲಿ ‘ತಪ್ಪು ಪೂಜಾಕ್ರಮದಿಂದಲೂ ಹೇಗೆ ಫಲ ಸಿಗುತ್ತದೆ’ ಎನ್ನುವ ಪ್ರಶ್ನೆ ನಮ್ಮಲ್ಲಿ ಸಹಜವಾಗಿ ಮೂಡುತ್ತದೆ.
ಕೃಷ್ಣ ಹೇಳುತ್ತಾನೆ “ನೀನು ಯಾರನ್ನು ಉಪಾಸನೆ ಮಾಡಿದರೂ ಕೊನೆಗೆ ಫಲ ಕೊಡುವವನು ನಾನೇ” ಎಂದು.
ಶಾಸ್ತ್ರಗಳಲ್ಲಿ ಹೇಳುವಂತೆ “ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ”. ಯಾರನ್ನು ಪೂಜೆ ಮಾಡಿದರೂ ಅದು ಸಲ್ಲುವುದು ಅದರೊಳಗಿನ ಭಗವಂತನನ್ನೇ.
ಆದರೆ ವ್ಯತ್ಯಾಸ ಒಂದೆ-ತಿಳಿದು ಮಾಡಿದಾಗ ‘ಶಾಶ್ವತವಾದ ಪೂರ್ಣಫಲ’, ತಿಳಿಯದೇ ಫಲ ಕಾಮನೆಯಿಂದ ಮಾಡಿದಾಗ ‘ಭೌತಿಕವಾದ ಅಲ್ಪಫಲ’.
ನಾವು ಯಾವುದೇ ಆರಾಧ್ಯ ಮೂರ್ತಿಯನ್ನು ಪೂಜಿಸಿದರೂ ಕೂಡಾ ಆ ಆರಾಧ್ಯ ಮೂರ್ತಿಯ ಅಂತರ್ಯಾಮಿಯಾಗಿದ್ದು ಫಲ ಕೊಡುವವನು ಭಗವಂತನೇ.
ಆದರೆ ‘ದೇವತಾ ಅಂತರ್ಗತನಾದ ಭಗವಂತ ಕೊಟ್ಟ’ ಅನ್ನುವ ಅರಿವು ನಮಗಿರುವುದಿಲ್ಲ ಅಷ್ಟೇ.
ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿಯೂ ಈ ಎಚ್ಚರ ಬಹಳ ಮುಖ್ಯ.
ನಾವು ನಮ್ಮ ಪ್ರತಿಯೊಂದು ಅನುಸಂಧಾನವನ್ನು ಭಗವಂತನ ಪೂಜಾ ರೂಪವಾಗಿ ಮಾಡಿ ಭವ್ಯವಾಗಿಸಬೇಕು.
ಇಲ್ಲದಿದ್ದರೆ ಮಹಾಫಲದಿಂದ ವಂಚಿತರಾಗಿ ಯಾವುದೋ ಕ್ಷುದ್ರ ಫಲ ನಮ್ಮದಾಗುತ್ತದೆ.
[ಇಲ್ಲಿ “ಮಯೈವ ವಿಹಿತಾನ್ ಹಿ ತಾನ್” ಎಂದರೆ ನಾನೇ ದೇವತೆಯೊಳಗಿದ್ದು ಫಲವನ್ನೂ ಕೊಡುವವನು ಎಂದರ್ಥವಾದರೆ,
‘ಮಯೈವ ವಿಹಿತಾನ್ ಹಿತಾನ್’ ಎಂದರೆ ‘ನೀನು ಬಯಸಿದ-‘ನಿನಗೆ ಹಿತವಾದ’ ಕ್ಷಣಿಕ ಫಲವನ್ನು ನನ್ನಿಂದ ಪಡೆಯುತ್ತೀಯ’ ಎಂದರ್ಥ].
