
ಫೆಬ್ರವರಿ 1ರಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡುವಾಗ ಹಣಕಾಸು ವಲಯಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಚರ್ಚೆಗಳು ನಡೆಯುತ್ತವೆ.
ಇವುಗಳಲ್ಲಿ ಪ್ರಮುಖವಾದವು ಜಿಡಿಪಿ ಮತ್ತು ಹಣದುಬ್ಬರ. ಹಣದುಬ್ಬರವನ್ನು ಕಡಿಮೆ ಮಾಡುವ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವುದು ಸರ್ಕಾರದ ಪ್ರಮುಖ ಗುರಿಯಾಗಿರುತ್ತದೆ.
ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಎಂಬುದು ಜಿಡಿಪಿಯ ಪರಿಪೂರ್ಣ ಅರ್ಥವಾಗಿದೆ. ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದಲ್ಲಿ ಸರಕು ಮತ್ತು ಸೇವೆಗಳ ಉತ್ಪಾದನೆಯ ಮೂಲಕ ರಚಿಸಲಾದ ಮೌಲ್ಯವರ್ಧಿತ ಪ್ರಮಾಣಿತ ಅಳತೆ ಇದಾಗಿದೆ. ಜಿಡಿಪಿಯನ್ನು ಮೂರು ರೀತಿಯಲ್ಲಿ ಆದಾಯ, ಖರ್ಚು ಮತ್ತು ಉತ್ಪಾದನಾ ವಿಧಾನ ಎಂದು ಲೆಕ್ಕಚಾರ ಹಾಕಲಾಗುತ್ತದೆ.
ಆರ್ಥಿಕ ಚಟುವಟಿಕೆಯ ಸಾಮಾನ್ಯ ಮಾಪನವಾಗಿ ಜಿಡಿಪಿಯನ್ನು ಬಳೆಕೆ ಮಾಡಲಾಗುತ್ತದೆ. 18ನೇ ಶತಮಾನದ ಕೊನೆಯಲ್ಲಿ ಜಿಡಿಪಿ ಮೂಲ ಪರಿಕಲ್ಪನೆ ಕಂಡುಹಿಡಿಯಲಾಯಿತು. 1934ರಲ್ಲಿ ಅಮೆರಿಕದ ಅರ್ಥ ಶಾಸ್ತ್ರಜ್ಞ ಸೈಮನ್ ಕುಜ್ನೆಟ್ಸ್ ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದರು. 1944ರಲ್ಲಿ ಬಿಟನ್ನ ವುಡ್ಸ್ ಸಮ್ಮೇಳನದಲ್ಲಿ ದೇಶದ ಆರ್ಥಿಕತೆಯ ಮುಖ್ಯ ಅಳತೆಗೋಲಾಗಿ ಜಿಡಿಪಿಯನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ.
ಸದ್ಯ ಒಂದು ರಾಷ್ಟ್ರದ ಆರ್ಥಿಕತೆಯ ಆರೋಗ್ಯವನ್ನು ಸೂಚಿಸಲು ಜಗತ್ತಿನಾದ್ಯಂತ ಬಳಸಲಾಗುವ ಏಕೈಕ ಪ್ರಮಾಣಿತ ಸೂಚಕ ಜಿಡಿಪಿ. ಜಿಡಿಪಿಯ ಅಡಿಯಲ್ಲಿ ಕುಟುಂಬದಲ್ಲಿ ನಿರ್ವಹಣೆ ಮಾಡುವ, ಸ್ವಯಂ ಸೇವಕ ಕೆಲಸಗಳನ್ನು ಜಿಡಿಪಿಯ ಅಡಿ ಸೇರಿಸಲಾಗುವುದಿಲ್ಲ. ಅಲ್ಲದೇ ಮಾರುಕಟ್ಟೆಯಲ್ಲಿ ಮಾರಾಟಕ್ಕಾಗಿ ಉತ್ಪಾದಿಸದ ಸರಕುಗಳನ್ನು ಸೇರಿಸುವುದಿಲ್ಲ. ಕಪ್ಪು ಮಾರುಕಟ್ಟೆ, ಕಾನೂನು ಬಾಹಿರ ಚಟುವಟಿಕೆಗಳನ್ನು, ಬಳಸಿದ ಸರಕುಗಳ ಮಾರಾಟವನ್ನು ಇದರಲ್ಲಿ ಸೇರಿಸುವುದಿಲ್ಲ.
ಲೋಕಸಭೆಯಲ್ಲಿ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು ಬಜೆಟ್ ಮಂಡಿಸುವಾಗ ಮುಂದಿನ ವರ್ಷದ ಬಂಡವಾಳ ವೆಚ್ಚ, ಜಿಡಿಪಿಯು ಎಷ್ಟಾಗಿರಲಿದೆ ಎಂದು ಅಂದಾಜು ಮಂಡಿಸುತ್ತಾರೆ. ಭಾರತದಲ್ಲಿ ಜಿಡಿಪಿಯನ್ನು ಎರಡು ವಿಧಾನದಲ್ಲಿ ಲೆಕ್ಕ ಹಾಕಲಾಗುತ್ತದೆ. ಒಂದು ಆರ್ಥಿಕ ಚಟುವಟಿಕೆಯ ಆಧಾರ, ಇನ್ನೊಂದು ವೆಚ್ಚದ ಮೇಲೆ. ಭಾರತದ ಆರ್ಥಿಕ ವರ್ಷವು ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ ಏಕೆ ನಡೆಯುತ್ತದೆ. ಪ್ರತಿ ತ್ರೈಮಾಸಿಕಕ್ಕೊಮ್ಮೆ ಜಿಡಿಪಿಯ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಹಣದುಬ್ಬರ ಎಂದರೇನು?
ದೇಶದ ಜನರ ಜೀವನಕ್ಕೂ ಹಣ ದುಬ್ಬರಕ್ಕೂ ನಡುವೆ ನೇರವಾದ ಸಂಬಂಧವಿದೆ. ಒಂದು ವೇಳೆ ಹಣದುಬ್ಬರ ಹೆಚ್ಚಾದರೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗುತ್ತದೆ. ಆದ್ದರಿಂದ ಜನರು ಹೆಚ್ಚಿನ ಹಣವನ್ನು ವ್ಯಯ ಮಾಡಬೇಕಾಗುತ್ತದೆ.
ಮನೆಯಲ್ಲಿ ಕಿಸೆಯಲ್ಲಿ ಕಾಸು ತೆಗೆದುಕೊಂಡು ಹೋಗಿ ಚೀಲದ ತುಂಬಾ ಸರಕು ತರುತ್ತಿದ್ದೆವು. ಈಗ ಚೀಲದ ತುಂಬಾ ದುಡ್ಡು ತೆಗೆದುಕೊಂಡು ಹೋಗಬೇಕು ಎಂದು ಹೇಳುವುದನ್ನು ಕೇಳುತ್ತಿರುತ್ತೇವೆ. ಹಣ ದುಬ್ಬರ ಹೆಚ್ಚಾದರೆ ಜನರ ಜೇಬಿಗೆ ಹೇಗೆ ಕತ್ತರಿ ಬೀಳುತ್ತದೆ? ಎಂಬುದಕ್ಕೆ ಇದು ನಿಜವಾದ ಉದಾಹರಣೆಯಾಗಿದೆ.
ಆಹಾರ, ಇಂಧನ, ಶಿಕ್ಷಣ ಹೀಗೆ ಕುಟುಂಬದ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಹಣದುಬ್ಬರವು ಏರಿಕೆಯಾದರೆ ವೆಚ್ಚ ಇನ್ನಷ್ಟು ಅಧಿಕವಾಗುತ್ತದೆ. ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಹಣದುಬ್ಬರ ಎಂದರೆ ಬೆಲೆ ಏರಿಕೆ. ನಿರ್ದಿಷ್ಟ ಸಮಯದಲ್ಲಿ ಸರಕು ಮತ್ತು ಸೇವೆಗಳ ಬೆಲೆ ಹೆಚ್ಚಳ ದೇಶದಲ್ಲಿ ಹಣದುಬ್ಬರದ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಹಣದುಬ್ಬರದಲ್ಲಿ ಚಿಲ್ಲರೆ ಮತ್ತು ಸಗಟು ಎಂದು ಎರಡು ವಿಧಗಳಿವೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಹಣ ದುಬ್ಬರ ಏರಿಕೆಯಾದರೆ ಅದು ಜಿಡಿಪಿ ಮೇಲೆ ನೇರ ಪರಿಣಾಮ ಬೀರುತ್ತದೆ. ಯಾವುದೇ ಸರಕು ಸೇವೆಗಳ ಬೆಲೆಗಳು ಏರಿಕೆಯಾದ ತಕ್ಷಣ ದೇಶದಲ್ಲಿ ಹಣದುಬ್ಬರವು ಏರುಮುಖವಾಗುತ್ತದೆ, ಆದರೆ ಬೆಲೆಗಳು ತಕ್ಷಣಕ್ಕೆ ಇಳಿಕೆಯಾಗುವುದು ತೀರಾ ಅಪರೂಪ.
ಸಗಟು ಬೆಲೆ ಸೂಚ್ಯಂಕ ಮತ್ತು ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಹಣದುಬ್ಬರ ಲೆಕ್ಕಾಚಾರ ಹಾಕಲಾಗುತ್ತದೆ. ಅಮೆರಿಕ, ಬ್ರಿಟನ್ ಸೇರಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಹುತೇಕ ರಾಷ್ಟ್ರಗಳಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಬಳಸಿ ಹಣ ದುಬ್ಬರವನ್ನು ಲೆಕ್ಕ ಹಾಕಲಾಗುತ್ತದೆ.