ನವದೆಹಲಿ, ಡಿ.24: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಗೆಬಗೆಯ ಫ್ಲೇವರ್ಡ್ ಟೀಗಳು ಹಾಗೂ ಹರ್ಬಲ್ ಟೀಗಳು ವ್ಯಾಪಕವಾಗಿ ಲಭ್ಯವಿದ್ದರೂ, ಇವೆಲ್ಲವನ್ನೂ ‘ಚಹಾ’ ಎಂದು ಕರೆಯಲು ಸಾಧ್ಯವಿಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸ್ಪಷ್ಟಪಡಿಸಿದೆ.
FSSAI ನೀಡಿರುವ ಆದೇಶದ ಪ್ರಕಾರ, Camellia sinensis ಎಂಬ ಚಹಾ ಗಿಡದಿಂದ ಪಡೆಯುವ ಉತ್ಪನ್ನಗಳಿಂದ ತಯಾರಿಸಲ್ಪಟ್ಟ ಪಾನೀಯಗಳನ್ನು ಮಾತ್ರ ‘ಚಹಾ’ ಎಂದು ಕರೆಯಬಹುದು. ಕಾಂಗ್ರಾ ಚಹಾ, ಹಸಿರು ಚಹಾ ಸೇರಿದಂತೆ ಈ ಗಿಡದಿಂದ ತಯಾರಿಸಲಾದ ಪಾನೀಯಗಳನ್ನಷ್ಟೇ ಟೀ ಹೆಸರಲ್ಲಿ ಮಾರಾಟ ಮಾಡಲು ಅವಕಾಶವಿದೆ. ಇದನ್ನು ಹೊರತುಪಡಿಸಿ ಇತರ ಯಾವುದೇ ಕಷಾಯಗಳು, ಹರ್ಬಲ್ ಇನ್ಫ್ಯೂಷನ್ಗಳು ಅಥವಾ ಪಾನೀಯಗಳನ್ನು ‘ಚಹಾ’ ಎಂದು ಕರೆಯುವಂತಿಲ್ಲ.
ಡಿಸೆಂಬರ್ 24ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ–2006 ಹಾಗೂ ಅದರ ನಿಯಮಾವಳಿಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು FSSAI ಎಚ್ಚರಿಸಿದೆ.
ಪ್ರಸ್ತುತ ಅಂಗಡಿಗಳು ಹಾಗೂ ಆನ್ಲೈನ್ ವೇದಿಕೆಗಳಲ್ಲಿ ‘ಹರ್ಬಲ್ ಟೀ’, ‘ಜಾಸ್ಮಿನ್ ಟೀ’, ‘ರೂಯಿಬೋಸ್ ಟೀ’, ‘ಹೂವಿನ ಚಹಾ’ ಎಂಬ ಹೆಸರಿನಲ್ಲಿ ಟೀ ಪುಡಿ ಮತ್ತು ಸ್ಯಾಚೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ Camellia sinensisನಿಂದ ಉತ್ಪತ್ತಿಯಾಗದ ಹರ್ಬಲ್ ಇನ್ಫ್ಯೂಷನ್ಗಳು ಅಥವಾ ಮಿಶ್ರಣಗಳನ್ನು ‘ಚಹಾ’ ಎಂದು ಕರೆಯಲು ಅವಕಾಶವಿಲ್ಲ ಎಂದು FSSAI ತಿಳಿಸಿದೆ. ಇಂತಹ ಮಾರಾಟವನ್ನು ಮಿಸ್ ಬ್ರ್ಯಾಂಡಿಂಗ್ ಎಂದು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಈ ಆದೇಶವು ಚಹಾ ಉತ್ಪನ್ನಗಳ ತಯಾರಿಕೆ, ಪ್ಯಾಕಿಂಗ್, ಆಮದು ಮತ್ತು ಮಾರಾಟದಲ್ಲಿ ತೊಡಗಿರುವ ಆಹಾರ ಉದ್ಯಮಿಗಳು ಹಾಗೂ ಇ-ಕಾಮರ್ಸ್ ವೇದಿಕೆಗಳಿಗೆ ಅನ್ವಯವಾಗಲಿದೆ. ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮತ್ತು ಮೇಲ್ವಿಚಾರಣೆಗಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಆಯುಕ್ತರು ಮತ್ತು FSSAIಯ ಪ್ರಾದೇಶಿಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
ಗಮನಾರ್ಹವಾಗಿ, ಆಹಾರ ವಸ್ತುಗಳ ತಪ್ಪು ಬ್ರ್ಯಾಂಡಿಂಗ್ ಕುರಿತು ಇತ್ತೀಚೆಗೆ FSSAI ನೀಡಿರುವ ಇದು ಎರಡನೇ ಎಚ್ಚರಿಕೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಹಣ್ಣು ಆಧಾರಿತ, ಕಾರ್ಬೊನೇಟ್ ರಹಿತ ಅಥವಾ ರೆಡಿ-ಟು-ಡ್ರಿಂಕ್ ಪಾನೀಯಗಳನ್ನು ‘ORS’ ಹೆಸರಲ್ಲಿ ಮಾರಾಟ ಮಾಡುವುದಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಇಂತಹ ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಆಯುಕ್ತರಿಗೆ ನಿಯಂತ್ರಕ ಪ್ರಾಧಿಕಾರ ಪತ್ರ ಬರೆದಿತ್ತು.
