ಟಿ.ನರಸೀಪುರ : ಅರಣ್ಯ ಇಲಾಖೆಯ ಕಾಯಂ ಅಧಿಕಾರಿ, ಸಿಬ್ಬಂದಿಗಳಿಗೆ ರೂ 1 ಕೋಟಿ ವಿಮೆ ಕಲ್ಪಿಸಿ ಹೊರಗುತ್ತಿಗೆ ಸಿಬ್ಬಂದಿಗಳಿಗೆ ರೂ 20 ಲಕ್ಷ ರೂಪಾಯಿಗಳ ವಿಮೆ ಕಲ್ಪಿಸಿರುವುದು ತಾರತಮ್ಯ ನೀತಿಯಾಗಿದ್ದು ಇದು ಸರ್ಕಾರದ ಸಮಾನ ಕೆಲಸಕ್ಕೆ ಸಮಾನ ವೇತನ ವೆಂಬ ನೀತಿಗೆ ವಿರುದ್ಧವಾಗಿದೆ.ಅಲ್ಲದೆ ಸಹಜ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು ಇದು ಸರಿಯಾದ ಕ್ರಮವಾಗಿರುವುದಿಲ್ಲವೆಂದು ಕನ್ನಡ ಸಾಂಸ್ಕೃತಿಕ ಪರಿಷತ್ತು ರಾಜ್ಯಾಧ್ಯಕ್ಷರು ಹಾಗೂ ಸಾಮಾಜಿಕ ಹೋರಾಟಗಾರ ಎಸ್ ಕೆ ರಾಜೂಗೌಡ ಖಂಡಸಿದ್ದಾರೆ.

ತಾಲ್ಲೂಕಿನ ಸೀಹಳ್ಳಿ ಗ್ರಾಮದಲ್ಲಿ ಮಾತನಾಡಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ₹೧ಕೋಟಿ ರೂಪಾಯಿಗಳ ವಿಮೆ (ಮರಣ) ಯನ್ನು ಬ್ಯಾಂಕ್ ಆಫ್ ಬರೋಡಾ ದೊಂದಿಗೆ ಒಪ್ಪಂದ ಮಾಡಿಕೊಂಡು ಜಾರಿಗೆ ತಂದಿರುವುದಾಗಿ ಅರಣ್ಯ ಸಚಿವರಾದ ಈಶ್ವರ್ ಬಿ ಖಂಡ್ರೆ ಅವರು ಹೇಳಿಕೆ ನೀಡಿದ್ದು, ಸಚಿವರು ಅರಣ್ಯ ಇಲಾಖೆಯ ನೌಕರರಿಗೆ ₹ 1ಕೋಟಿ ರೂಪಾಯಿಗಳ ಅಫಘಾತ (ಮರಣ) ವಿಮೆ ಜಾರಿಗೆ ತಂದಿರುವುದು ಒಳ್ಳೆಯ ಸ್ವಾಗತಾರ್ಹ ಕ್ರಮವಾಗಿದೆ.ಸರ್ಕಾರದ ನಾನಾ ಇಲಾಖೆಗಳಲ್ಲಿ 2,86,000 ಹುದ್ದೆಗಳು ಖಾಲಿಯಿದ್ದರು ಸಹ ಖಾಲಿ ಹುದ್ದೆಗಳ ಭರ್ತಿಗೆ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ.

ಈಗಾಗಲೇ ಗುತ್ತಿಗೆ/ಹೊರಗುತ್ತಿಗೆ ಹೆಸರಿನಲ್ಲಿ ಸಮಾನ ಕೆಲಸ ಮಾಡುವ ನೌಕರರಿಗೆ ನೀಡುವ ವೇತನದಲ್ಲೂ ಅಜಗಜಾಂತರ ವ್ಯತ್ಯಾಸ ಮಾಡಿ ವೇತನ ನೀಡುತ್ತಿರುವುದು ಸಾಮಾಜಿಕ ತಾರತಮ್ಯ ನೀತಿಯಾಗಿದೆ ಇದು ಖಂಡನೀಯವಾಗಿದೆ ಎಂದರು.

ಸರ್ಕಾರದ ಸುಗಮ ಆಡಳಿತಕ್ಕಾಗಿ ಕೆಲಸಮಾಡುವ ಗುತ್ತಿಗೆ/ಹೊರಗುತ್ತಿಗೆ ನೌಕರರಿಗೆ ಮಾನಸಿಕ ಕಿರುಕುಳಕ್ಕೆ ಕಾರಣವಾಗಿದೆ ಅಲ್ಲದೆ ಅವರ ಕುಟುಂಬ ನಿರ್ವಹಣೆಗೆ ಪರಿತಪಿಸುವಂತಾಗಿದೆ.
ಆದ್ದರಿಂದ ಸರ್ಕಾರ ಮತ್ತು ಸಚಿವರು ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೇರ ಪಾವತಿ ಮೂಲಕ ನೀಡಲು ಕ್ರಮ ಕೈಗೊಳ್ಳಬೇಕು ಹಾಗೂ ಅರಣ್ಯ ಇಲಾಖೆಯ ಕಾಯಂ ಅಧಿಕಾರಿ, ಸಿಬ್ಬಂದಿಗಳಿಗೆ ಕಲ್ವಿಸಿರುವ ₹1 ಕೋಟಿ ವಿಮೆಯನ್ನು ಕಾಯಂ, ಗುತ್ತಿಗೆ , ಹೊರಗುತ್ತಿಗೆ ನೌಕರರು ಎಂಬ ಭೇದವಿಲ್ಲದೆ ಎಲ್ಲಾ ನೌಕರರಿಗೂ ₹1 ಕೋಟಿ ರೂಪಾಯಿಗಳ ವಿಮಾ ಸೌಲಭ್ಯವನ್ನು ನೀಡಬೇಕೆಂದು ಆಗ್ರಹಿಸಿದರು.
ಎಂ.ನಾಗೇಂದ್ರಕುಮಾರ್
