ಶ್ಲೋಕ – 01
ಅರ್ಜುನ ಉವಾಚ ।
ಕಿಂ ತದ್ ಬ್ರಹ್ಮ ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ ।
ಅಧಿಭೂತಂ ಚ ಕಿಂ ಪ್ರೋಕ್ತಮಧಿದೈವಂ ಕಿಮುಚ್ಯತೇ ॥೧॥
ಅರ್ಜುನ ಉವಾಚ
ಕಿಮ್ ತತ್ ಬ್ರಹ್ಮ ಕಿಮ್ ಅಧ್ಯಾತ್ಮಮ್ ಕಿಮ್ ಕರ್ಮ ಪುರುಷೋತ್ತಮ ।
ಅಧಿಭೂತಮ್ ಚ ಕಿಮ್ ಪ್ರೋಕ್ತಮ್ ಅಧಿದೈವಮ್ ಕಿಮ್ ಉಚ್ಯತೇ –
ಅರ್ಜುನ ಕೇಳಿದನು: ಪುರುಷೋತ್ತಮ, ಯಾವುದು ಆ ‘ಬ್ರಹ್ಮ’? ‘ಅಧ್ಯಾತ್ಮ’ವೆಂದರೆ ಏನು? ಏನು ‘ಕರ್ಮ’ವೆಂದರೆ? ಯಾವುದನ್ನು ‘ಅಧಿಭೂತ’ವೆನ್ನುತ್ತಾರೆ? ಯಾವುದನ್ನು ‘ಅಧಿದೈವ’ವೆನ್ನುತ್ತಾರೆ?
ಅರ್ಜುನ ಕೃಷ್ಣನನ್ನು ಕೇಳುತ್ತಾನೆ “ ತತ್ ಬ್ರಹ್ಮ(ಆ ಬ್ರಹ್ಮತತ್ವ) ಅಂದರೆ ಯಾವುದು? ಅಧ್ಯಾತ್ಮ ಅಂದರೆ ಏನು? ಮತ್ತು ಕರ್ಮ ಅಂದರೇನು?” ಎಂದು.
ಇಲ್ಲಿ ವ್ಯಾಸರು ಅರ್ಜುನನ ಈ ಪ್ರಶ್ನೆಯ ಹಿಂದಿನ ಭಾವನೆಯನ್ನು “ಪುರುಷೋತ್ತಮ” ಎನ್ನುವ ವಿಶೇಷಣದಲ್ಲಿ ಹಿಡಿದು ನಮ್ಮ ಮುಂದಿಟ್ಟಿದ್ದಾರೆ. ಪುರುಷೋತ್ತಮ ಎಂದರೆ ಕ್ಷರ(ಜೀವ)ವನ್ನು ಮೀರಿನಿಂತವನು. ಅಕ್ಷರ(ಶ್ರೀತತ್ವ)ಕ್ಕಿಂತಲೂ ಹಿರಿಯನು. “ಕ್ಷರ-ಅಕ್ಷರವನ್ನು ಮೀರಿ ನಿಂತ ನೀನೇ ಪುರುಷೋತ್ತಮ, ನೀನಲ್ಲದೆ ನಿನ್ನಿಂದ ಹಿರಿದಾದ ತತ್ವ ಇನ್ನೊಂದಿಲ್ಲ, ಆದ್ದರಿಂದ ನನಗೆ ತಿಳಿದಂತೆ ನೀನೇ ಬ್ರಹ್ಮ. ಇದರ ವಿವರಣೆಯನ್ನು ನಿನ್ನಿಂದ ತಿಳಿಯಬೇಕು” ಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ ಎನ್ನುವುದನ್ನು ತಿಳಿಸುವ ವಿಶೇಷಣ ‘ಪುರುಷೋತ್ತಮ’.
ಅರ್ಜುನ ಕೇಳುತ್ತಾನೆ “ಯಾವುದನ್ನು ಅಧಿಭೂತವೆನ್ನುತ್ತಾರೆ? ಯಾವುದನ್ನು ಅಧಿದೈವವೆನ್ನುತ್ತಾರೆ?” ಎಂದು.
