ಕೆ.ಆರ್.ಪೇಟೆ,ಡಿ.27: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದ ನಿವಾಸಿ ಸೋಮಶೇಖರ್ ಅವರು ಸತತ 9ವರ್ಷಗಳಿಂದ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿದಿಗೆ ಪಾದಯಾತ್ರೆ ಮೂಲಕ ತೆರಳಿ ಸ್ವಾಮಿಯ ದರ್ಶನ ಪಡೆದುಕೊಂಡು ಬರುತ್ತಿದ್ದು ಇವರ ಭಕ್ತಿಯ ಪರಾಕಾಷ್ಟೆಗೆ ಎಲ್ಲರಿಂದಲೂ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
ಸುಮಾರು 46ವರ್ಷ ವಯಸ್ಸಿನ ಸೋಮಶೇಖರ್ ಅವರು 2013ರಿಂದ ಇಲ್ಲಿಯವರೆಗೆ ಸುಮಾರು 9ಭಾರಿ ಪಾದಯಾತ್ರೆ ಮೂಲಕ ಅಯ್ಯಪ್ಪಸ್ವಾಮಿ ದರ್ಶನ ಪಡೆದು ಗಮನ ಸೆಳೆದಿದ್ದಾರೆ. 4ಕಿ.ಮೀ ನಡೆಯಲು ಹಿಂದೆ-ಮುಂದೆ ನೋಡುವ ಈ ಕಾಲದಲ್ಲಿ ಬರೋಬ್ಬರಿ 650ಕಿ.ಮೀ ದೂರದ ಶಬರಿಮಲೆ ಸನ್ನಿದಿಗೆ ಪಾದಯಾತ್ರೆ ಮಾಡುತ್ತಿರುವ ಸೋಮಶೇಖರ್ ಅವರ ಅಯ್ಯಪ್ಪಸ್ವಾಮಿಯ ಮೇಲಿನ ಭಕ್ತಿಯಿಂದ ಇದು ಸಾಧ್ಯವಾಗಿದೆ ಎನ್ನಲಾಗುತ್ತಿದೆ.

ಪ್ರತಿದಿನಕ್ಕೆ ಸುಮಾರು 30ರಿಂದ 40ಕಿ.ಮೀ ನಡೆಯುವ ಸೋಮಶೇಖರ್ ಸುಮಾರು 18ದಿನಗಳ ಕಾಲ 650ಕಿ.ಮೀ ದೂರದ ಶಬರಿಮಲೆ ಸನ್ನಿದಿಗೆ ತಲುಪುತ್ತಾರೆ. ಪಾದಯಾತ್ರೆಯ ಮಧ್ಯೆ ಅಲ್ಲಲ್ಲಿ ದೇವಾಲಯಗಳು, ಶ್ರೀ ಕ್ಷೇತ್ರಗಳಲ್ಲಿ ತಂಗುವ ಸೋಮಶೇಖರ್ ಬೆಳಿಗ್ಗೆ ಸ್ನಾನ, ಮಡಿ, ಪೂಜೆ ಪುನಸ್ಕಾರ ಮಾಡಿ ನಂತರ ಬೆಳಿಗ್ಗೆ ಪಾದಯಾತ್ರೆ ಆರಂಭಿಸಿ, ಸಂಜೆಯವರೆವಿಗೂ ಪಾದಯಾತ್ರೆ ಮುಂದುವರೆಸುತ್ತಾರೆ. ಹೀಗೆ 16ರಿಂದ 18ದಿನಗಳ ಕಾಲ ಪಾದಯಾತ್ರೆಯಲ್ಲಿ ಸಾಗಿ ಶಬರಿಮಲೆ ಸನ್ನಿಗೆ ಹೋಗಿ ಅಯ್ಯಪ್ಪಸ್ವಾಮಿಯ ದರ್ಶನವನ್ನು ಮಾಡಿಕೊಂಡು ಬರುತ್ತಾರೆ.

ದರ್ಶನ ಮುಗಿಸಿದ ನಂತರ ವಾಪಸ್ ಬಸ್ಸಿನಲ್ಲಿ ಬರುತ್ತಾರೆ. ಹೀಗೆ ತಮ್ಮಲ್ಲಿರುವ ಅಯ್ಯಪ್ಪಸ್ವಾಮಿ ಬಗ್ಗೆ ಹೊಂದಿರುವ ವಿಶೇಷ ಭಕ್ತಿಯಿಂದಾಗಿ ಕಳೆದ 27ವರ್ಷಗಳಿಂದ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿರುವ ಸೋಮಶೇಖರ್ ಅವರು ಕಳೆದ 9ವರ್ಷಗಳಿಂದ 650ಕಿ.ಮೀ. ಪಾದಯಾತ್ರೆ ಮೂಲಕ ಶಬರಿಮಲೆಗೆ ಹೋಗಿ ಅಯ್ಯಪ್ಪಸ್ವಾಮಿ ದರ್ಶನ ಪಡೆಯುತ್ತಿರುವುದು ವಿಶೇಷವಾಗಿದೆ.
– ಶ್ರೀನಿವಾಸ್ ಆರ್.

[…] […]