ಚಳಿಗಾಲದಲ್ಲಿ ಶೀತ ವಾತಾವರಣದ ಪರಿಣಾಮವಾಗಿ ಶೀತ, ಕೆಮ್ಮು, ನೆಗಡಿ, ಗಂಟಲು ನೋವು ಹಾಗೂ ತ್ವಚೆ ಸಂಬಂಧಿ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಈ ಋತುವಿನಲ್ಲಿ ಆರೋಗ್ಯದ ಕುರಿತು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಲವರು ಕಷಾಯ, ಪೌಷ್ಟಿಕ ಆಹಾರಗಳ ಜೊತೆಗೆ ನೈಸರ್ಗಿಕ ಪದಾರ್ಥಗಳನ್ನೂ ಸೇವಿಸುತ್ತಾರೆ. ಇಂತಹ ಸಂದರ್ಭದಲ್ಲಿ ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪ ಸೇವಿಸುವುದು ಹಲವು ಆರೋಗ್ಯ ಲಾಭಗಳನ್ನು ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಉತ್ತಮ ನಿದ್ರೆಗೆ ಸಹಕಾರಿ
ಜೇನುತುಪ್ಪದಲ್ಲಿ ಇರುವ ಗ್ಲೂಕೋಸ್ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲದ ಉತ್ಪಾದನೆ ಹೆಚ್ಚಾಗಿ, ಅದು ಸಿರೊಟೋನಿನ್ ಹಾಗೂ ಮೆಲಟೋನಿನ್ ಆಗಿ ಪರಿವರ್ತನೆಯಾಗುತ್ತದೆ. ಇವು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗಿವೆ. ಹೀಗಾಗಿ ಮಲಗುವ ಮುನ್ನ ಜೇನುತುಪ್ಪ ಸೇವನೆ ಉತ್ತಮ ನಿದ್ರೆಗೆ ನೆರವಾಗುತ್ತದೆ.
ರೋಗನಿರೋಧಕ ಶಕ್ತಿ ವೃದ್ಧಿ
ಜೇನುತುಪ್ಪವು ಆಂಟಿಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ವಿಟಮಿನ್ ಸಿ ಮತ್ತು ಸತು ಅಂಶಗಳಿರುವುದರಿಂದ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಶೀತ, ಜ್ವರದಂತಹ ಸಮಸ್ಯೆಗಳನ್ನು ದೂರ ಇಡಲು ಸಹಾಯ ಮಾಡುತ್ತದೆ.
ಗಂಟಲು ನೋವು ಹಾಗೂ ಕೆಮ್ಮಿಗೆ ಪರಿಹಾರ
ಚಳಿಗಾಲದಲ್ಲಿ ಸಾಮಾನ್ಯವಾಗಿರುವ ಗಂಟಲು ನೋವು ಮತ್ತು ಕೆಮ್ಮನ್ನು ಕಡಿಮೆ ಮಾಡಲು ಜೇನುತುಪ್ಪ ಉಪಯುಕ್ತ. ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪ ಸೇವಿಸಿದರೆ ಗಂಟಲು ಆರಾಮವಾಗುತ್ತದೆ, ಕೆಮ್ಮು ಕಡಿಮೆಯಾಗುತ್ತದೆ ಹಾಗೂ ಉಸಿರಾಟ ಸುಧಾರಿಸುತ್ತದೆ.
ತ್ವಚೆಯ ಕಾಂತಿ ಹೆಚ್ಚಳ
ವಿಟಮಿನ್ ಇ ಮತ್ತು ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವ ಜೇನುತುಪ್ಪ ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡಿ ತೇವಾಂಶ ಕಾಪಾಡುತ್ತದೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಿ, ಕಾಲಜನ್ ಉತ್ಪಾದನೆಗೆ ಸಹಕಾರಿಯಾಗುತ್ತದೆ. ಪರಿಣಾಮವಾಗಿ ವಯಸ್ಸಿನ ಚಿಹ್ನೆಗಳು ನಿಧಾನಗೊಳ್ಳುತ್ತವೆ.
ಹೃದಯ ಆರೋಗ್ಯಕ್ಕೆ ಲಾಭ
ಜೇನುತುಪ್ಪದಲ್ಲಿರುವ ಫ್ಲೇವನಾಯ್ಡ್ಗಳು ಮತ್ತು ಫೀನಾಲಿಕ್ ಸಂಯುಕ್ತಗಳು ರಕ್ತನಾಳಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ಇದು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣ, ರಕ್ತದೊತ್ತಡ ಸಮತೋಲನ ಮತ್ತು ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.
ಯಾರು ಜೇನುತುಪ್ಪ ಸೇವಿಸಬಾರದು?
ಜೇನುತುಪ್ಪ ಆರೋಗ್ಯಕರವಾದರೂ, ಒಂದು ವರ್ಷದೊಳಗಿನ ಮಕ್ಕಳಿಗೆ ನೀಡಬಾರದು. ಮಧುಮೇಹ ಹೊಂದಿರುವವರು ಹಾಗೂ ಅಲರ್ಜಿ ಇರುವವರು ವೈದ್ಯರ ಸಲಹೆ ಮೇರೆಗೆ ಮಾತ್ರ ಸೇವಿಸಬೇಕು. ಅತಿಯಾಗಿ ಸೇವಿಸುವುದನ್ನು ತಪ್ಪಿಸುವುದು ಒಳಿತು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಸೂಚನೆ: ಯಾವುದೇ ಆರೋಗ್ಯ ಅಭ್ಯಾಸವನ್ನು ಆರಂಭಿಸುವ ಮುನ್ನ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ.

[…] […]