ಹಾಸನ: ಜಿಲ್ಲೆಯ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಅಕ್ಕಿ ಸಾಗಣೆ ಲಾರಿ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ, ಪತ್ರಕರ್ತರ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಪತ್ರಕರ್ತರ ಸಂಘವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರಿಗೆ ಇಂದು ಲಿಖಿತ ದೂರು ಸಲ್ಲಿಸಿದೆ.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಆರ್. ಕೆಂಚೇಗೌಡ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದರು. ಅಕ್ರಮವಾಗಿ ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿಯನ್ನು ಆಲೂರು ಪೊಲೀಸರು ವಶಕ್ಕೆ ಪಡೆದಿರುವುದು ಸರಿಯಾದ ಕ್ರಮವೇ ಆಗಿದೆ. ಆದರೆ, ಲಾರಿ ಮಾಲೀಕರಿಂದ ಅಥವಾ ಸಂಬಂಧಪಟ್ಟವರಿಂದ ಪತ್ರಕರ್ತರ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗಿದೆ ಎಂಬ ವಿಚಾರ ಸಂಘದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ರೀತಿಯ ಬೆಳವಣಿಗೆಗಳಿಂದ ಹಾಸನ ಜಿಲ್ಲೆಯ ಪತ್ರಕರ್ತರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡುವಂತಾಗಿದ್ದು, ಪತ್ರಕರ್ತರ ಸಮುದಾಯಕ್ಕೆ ಕಳಂಕ ತರುವ ಸಾಧ್ಯತೆ ಉಂಟಾಗಿದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ. ಹೀಗಾಗಿ ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ, ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಘದ ಅಧ್ಯಕ್ಷ ಕೆಂಚೇಗೌಡರು ಎಸ್ಪಿ ಅವರನ್ನು ಮನವಿ ಮಾಡಿದರು. ತನಿಖೆಗೆ ಸಂಘವು ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ದೂರು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಈ ಸಂಬಂಧ ಹೊಸದಾಗಿ ಎಫ್ಐಆರ್ ದಾಖಲಿಸುವ ಅಗತ್ಯವಿದೆ ಎಂದರು. ಪತ್ರಕರ್ತರ ಕುರಿತು ಕೇಳಿಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಲಿಖಿತ ದೂರು ನೀಡಿರುವುದು ಇದೇ ಮೊದಲು ಹಾಗೂ ಇದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು. ಇದರಿಂದ ಸುಳ್ಳು ಪ್ರಚಾರ ಮತ್ತು ವ್ಯಕ್ತಿಗತ ಗುರಿತಪ್ಪಿಸುವ ವರದಿಗಳಿಗೆ ಕಡಿವಾಣ ಬೀಳಲಿದೆ ಎಂದು ಹೇಳಿದರು. ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುವ ಭರವಸೆಯನ್ನು ಅವರು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ಕಾರ್ಯದರ್ಶಿಗಳಾದ ಕೆ.ಎಂ. ಹರೀಶ್, ಕುಶ್ವಂತ್, ಖಜಾಂಚಿ ಪ್ರಕಾಶ್ (ಟಿವಿ5), ಕಾರ್ಯಕಾರಿ ಸಮಿತಿ ಸದಸ್ಯರಾದ ನಟರಾಜ್, ಶರಣ್ ಬಾಳ್ಳುಗೋಪಾಲ್, ಕೃಷ್ಣ ಇಬ್ಬೀಡು, ಶರತ್ ಹೆಚ್.ಆರ್., ಮೋಹನ್ ಕೆ.ಎಂ., ಸಚಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

[…] […]