ಶ್ಲೋಕ – 05
ಅಂತಕಾಲೇ ಚ ಮಾಮೇವ ಸ್ಮರನ್ ಮುಕ್ತ್ವಾ ಕಳೇಬರಮ್ ।
ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ॥೫॥
ಅಂತಕಾಲೇ ಚ ಮಾಮ್ ಏವ ಸ್ಮರನ್ ಮುಕ್ತ್ವಾ ಕಳೇಬರಮ್ ।
ಯಃ ಪ್ರಯಾತಿ ಸ ಮತ್ ಭಾವಮ್ ಯಾತಿ ನ ಅಸ್ತಿ ಅತ್ರ ಸಂಶಯಃ –ಕೊನೆಯ ಕಾಲದಲ್ಲು ನನ್ನನ್ನೆ ನೆನೆಯುತ್ತ ದೇಹವನ್ನು ತೊರೆದು ತೆರಳುವವನು ನನ್ನಂತಯೆ ದುಃಖವಿರದ ಸುಖದ ನಿಜಸ್ಥಿತಿಯನ್ನು [ನನ್ನಲ್ಲೆ ಇರವನ್ನು] ಪಡೆಯುತ್ತಾನೆ.
ಅರ್ಜುನನ ಕೊನೆಯ ಪ್ರಶ್ನೆಗೆ ಕೃಷ್ಣ ಉತ್ತರಿಸುತ್ತಾ ಹೇಳುತ್ತಾನೆ “ಸಾಯುವ ಕ್ಷಣದಲ್ಲೂ ಕೂಡ ನನ್ನನ್ನೇ ನೆನೆಯುತ್ತಾ ದೇಹವನ್ನು ತೊರೆಯುವ ಜೀವರು ನನ್ನ ಹಾಗೇ ಜ್ಞಾನಾನಂದ ಸ್ವರೂಪರಾಗಿ ನನ್ನಲ್ಲಿ ಬಂದು ನೆಲೆಸುತ್ತಾರೆ. ಅವರು ಮುಂದೆಂದೂ ಈ ಅಜ್ಞಾನ ಮತ್ತು ದುಃಖಮಯವಾದ ಸಂಸಾರದ ತೊಳಲಾಟಕ್ಕೆ ಒಳಗಾಗುವುದಿಲ್ಲ. ಈ ಬಗ್ಗೆ ಎಂದೂ ಸಂಶಯ ಪಡಬೇಡ” ಎಂದು. ಇಲ್ಲಿ “ಅಂತಕಾಲೇ” ಎಂದರೆ ಮುಪ್ಪಿನ ಕಾಲದಲ್ಲಿ ಎನ್ನುವ ಅರ್ಥವಲ್ಲ ಬದಲಿಗೆ ದೇಹವನ್ನು ಜೀವ ಬಿಡುವ ಕೊನೆಯ ಕ್ಷಣ ಎಂದರ್ಥ. ದೇಹವನ್ನು ಬಿಡುತ್ತಾ ಭಗವಂತನನ್ನು ಸ್ಮರಿಸುತ್ತಾ ಹೊರಗೆ ಹೋಗುವ ಚೇತನಕ್ಕೆ ಅಗಾಧವಾದ ಬೆಳಕು ಕಾಣಿಸುತ್ತದೆ ಮತ್ತು ಆ ಚೇತನ ಮೋಕ್ಷವನ್ನು ಸೇರುತ್ತದೆ. [ಜೀವ ಶರೀರವನ್ನು ಬಿಡುವ ಮತ್ತು ದೇಹದಿಂದ ಹೊರ ಬಂದ ಮೇಲೆ ಜೀವದ ಪ್ರಯಾಣದ ಕುರಿತು ಸತ್ತು ಬದುಕಿದ ಅನೇಕ ಜನರ ಅನುಭವವನ್ನು ಸಂಗ್ರಹಿಸಿ Raymond Mody ಬರೆದ “Life after Life” ಎನ್ನುವ ಪುಸ್ತಕ ಬೆಳಕು ಚೆಲ್ಲುತ್ತದೆ].
