ಬೇಲೂರು : ತಾಲೂಕಿನ ಚೀಕನಹಳ್ಳಿ ಸಮೀಪದ ಮಾಡಗೋಡು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸಂಬಂಧಪಟ್ಟ ಇಂಜಿನಿಯರ್ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸಾರ್ವಜನಿಕ ಹಣ ದುರುಪಯೋಗವಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ನಿರ್ಮಾಣದಲ್ಲಿ ಬಳಸಬೇಕಾದ ಸಿಮೆಂಟ್, ಜಲ್ಲಿ ಹಾಗೂ ಎಂ–ಸ್ಯಾಂಡ್ ಅನ್ನು ಸರಿಯಾದ ಪ್ರಮಾಣದಲ್ಲಿಯೂ, ನಿಗದಿತ ಮಾನದಂಡಗಳ ಪ್ರಕಾರವೂ ಬಳಸಿಲ್ಲ. ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಿರುವುದು ಸ್ಥಳ ಪರಿಶೀಲನೆಯಲ್ಲೇ ಸ್ಪಷ್ಟವಾಗಿ ಕಾಣಿಸುತ್ತಿದೆ ಹಾಗು ರಸ್ತೆಯ ದಪ್ಪ ಮತ್ತು ಅಗಲ ಡಾಂಬರೀಕರಣ ಹಾಗು ಕಳಪೆ ಮಟ್ಟದ ಅವೈಜ್ಞಾನಿಕ ಕೆಲಸ ಇದು ಎಂದು ಗ್ರಾಮಸ್ಥರು ಆರೋಪಿಸಿದರು.
ಸುಮಾರು 300 ಚೀಲ ಸಿಮೆಂಟ್ಗೆ ಕೇವಲ 250 ಚೀಲಗಳನ್ನು ಮಾತ್ರ ಬಳಸಿರುವ ಅನುಮಾನ ವ್ಯಕ್ತವಾಗಿದ್ದು, ರಸ್ತೆ ನಿರ್ಮಾಣಕ್ಕೆ ಅಗತ್ಯವಿದ್ದ ವಸ್ತುಗಳನ್ನು ಸಂಪೂರ್ಣವಾಗಿ ಬಳಸದೇ ಕಾಮಗಾರಿ ಮುಗಿಸಲಾಗಿದೆ ಎಂದು ದೂರಿದರು.
ರಸ್ತೆ ಪ್ರಾರಂಭದಲ್ಲಿ ಅಳತೆಗಾಗಿ ಹಾಕಬೇಕಾದ ಕಂಬ್ಯೂಟರ್ಗಳನ್ನು ಅಳವಡಿಸದೇ, ಮಧ್ಯಭಾಗದಲ್ಲಿ ಮಾತ್ರ ಅಳವಡಿಸಿರುವುದು ನಿಯಮ ಉಲ್ಲಂಘನೆಯಾಗಿದೆ. ಇದರಿಂದಲೇ ಕಾಮಗಾರಿ ಗುಣಮಟ್ಟದ ಮೇಲೆ ಅನುಮಾನ ಮೂಡಿದೆ . ಜೆಸಿಬಿ ಯಂತ್ರ ಬಳಸಿ ಮಣ್ಣನ್ನು ತೆಗೆದು ಹಾಕಿ, ಸಮರ್ಪಕ ಅಡಿಪಾಯವಿಲ್ಲದೆ ರಸ್ತೆ ನಿರ್ಮಿಸಿರುವುದರಿಂದ ರಸ್ತೆಯ ದೀರ್ಘಾಯುಷ್ಯ ಪ್ರಶ್ನಾರ್ಥಕವಾಗಿದೆ.
ಇನ್ನೂ ಹೆಚ್ಚು ಗಂಭೀರವಾದ ವಿಷಯವೆಂದರೆ, ಗ್ರಾಮದ ಶಾಲೆಯ ಆವರಣದಲ್ಲಿ ಮಕ್ಕಳ ಆಟದ ಮೈದಾನದಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದ ಸಿಮೆಂಟ್, ಜಲ್ಲಿ ಸೇರಿದಂತೆ ವಿವಿಧ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಸಂಗ್ರಹಿಸಿ ಬಿಟ್ಟಿರುವುದು. ಇದರಿಂದ ಮಕ್ಕಳಿಗೆ ಆಟವಾಡಲು ಸಾಧ್ಯವಾಗುತ್ತಿಲ್ಲ ಮತ್ತು ಅವರ ಸುರಕ್ಷತೆಗೆ ಅಪಾಯ ಎದುರಾಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಗುತ್ತಿಗೆದಾರರು ಸಾರ್ವಜನಿಕ ರಸ್ತೆಗೆ ಪ್ರಾಮುಖ್ಯತೆ ನೀಡದೇ, ತಮ್ಮ ಹಾಗೂ ಕೆಲವರ ಮನೆಗಳ ಮುಂದೆ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಕೇವಲ ಎರಡು ಮೀಟರ್ ಅಗಲದ ರಸ್ತೆಗಳನ್ನು ಹಾಕಿರುವುದು ಕಂಡುಬಂದಿದೆ. ಇದನ್ನು ನೋಡಿದರೆ ಗ್ರಾಮಕ್ಕೆ ರಸ್ತೆ ಹಾಕಲು ಬಂದವರಲ್ಲ, ತಮ್ಮ ಸ್ವಾರ್ಥಕ್ಕಾಗಿ ಕಾಮಗಾರಿ ನಡೆಸಿದ್ದಾರೆ ಎಂಬ ಅನುಮಾನ ಮತ್ತಷ್ಟು ಬಲವಾಗುತ್ತಿದೆ .
ಈ ಕಾಮಗಾರಿಗೆ ಸಂಬಂಧಿಸಿದಂತೆ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಗುದ್ದಲಿ ಪೂಜೆ ನೆರವೇರಿಸಿ ತೆರಳಿದ್ದಾರೆ. ಈ ವೇಳೆ ಗ್ರಾಮಸ್ಥರು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದಾಗ, ವಿಚಾರವಾಗಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಆದರೆ ಇದುವರೆಗೂ ಯಾವುದೇ ಸ್ಪಷ್ಟ ಕ್ರಮವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ತಕ್ಷಣವೇ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜೊತೆಗೆ ಮಾನದಂಡದ ಪ್ರಕಾರ ರಸ್ತೆ ಪುನರ್ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ನವೀನ್, ಅಕ್ಷಯ್, ಆಕಾಶ್, ಸಂಜು, ಪ್ರಸನ್ನ ಹಾಗೂ ಪರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ತಮ್ಮ ಆಕ್ರೋಶವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು.
