ಬೆಂಗಳೂರು: ರಾಜ್ಯ ಸರ್ಕಾರವು 2026ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜೆಗಳ ಪಟ್ಟಿಗೆ ಅಧಿಕೃತವಾಗಿ ಅನುಮೋದನೆ ನೀಡಿದೆ. ಒಟ್ಟು 20 ಸಾರ್ವತ್ರಿಕ ರಜೆ ದಿನಗಳು ಮತ್ತು 21 ಪರಿಮಿತ (Restricted) ರಜೆ ದಿನಗಳು ಈ ಪಟ್ಟಿಯಲ್ಲಿ ಸೇರಿವೆ.
ಸರ್ಕಾರದ ಪ್ರಕಟಣೆ ಪ್ರಕಾರ, ಭಾನುವಾರಕ್ಕೆ ಬರುವ ಮಹಾ ಶಿವರಾತ್ರಿ (ಫೆ.15), ಮಹರ್ಷಿ ವಾಲ್ಮೀಕಿ ಜಯಂತಿ (ಅ.25), ಕನ್ನಡ ರಾಜ್ಯೋತ್ಸವ (ನ.1) ಹಾಗೂ ನರಕ ಚತುರ್ದಶಿ (ನ.8) ಮತ್ತು ಎರಡನೇ ಶನಿವಾರಕ್ಕೆ ಬರುವ ಮಹಾಲಯ ಅಮವಾಸ್ಯೆ (ಅ.10) ಅನ್ನು ಸಾರ್ವತ್ರಿಕ ರಜೆ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುವುದಾಗಿ ಸರ್ಕಾರ ತಿಳಿಸಿದೆ. ಆದರೆ ಅಗತ್ಯ ಸೇವೆಗಳು ಮತ್ತು ತುರ್ತು ಕೆಲಸಗಳ ನಿರ್ವಹಣೆಗೆ ಸಂಬಂಧಿಸಿದಂತೆ ಆಯಾ ಇಲಾಖೆಗಳ ಮುಖ್ಯಸ್ಥರು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.
ಮುಸಲ್ಮಾನ ಬಾಂಧವರ ಹಬ್ಬಗಳಿಗೆ ಸಂಬಂಧಿಸಿದಂತೆ, ನಿಗದಿತ ದಿನಾಂಕದಂದು ಹಬ್ಬಗಳು ಬಾರದಿದ್ದಲ್ಲಿ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ನೌಕರರಿಗೆ ನಿಗದಿತ ರಜೆಯ ಬದಲಾಗಿ ಹಬ್ಬದ ನಿಜವಾದ ದಿನ ರಜೆ ಮಂಜೂರು ಮಾಡುವ ಅವಕಾಶ ನೀಡಲಾಗಿದೆ.
ಇದಲ್ಲದೆ, ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಮೂರು ಸ್ಥಳೀಯ ಸಾರ್ವತ್ರಿಕ ರಜೆಗಳನ್ನು ಸರ್ಕಾರ ಘೋಷಿಸಿದೆ.
ಅವುಗಳು:
- ಸೆಪ್ಟೆಂಬರ್ 3, 2026 (ಗುರುವಾರ) – ಕೈಲ್ ಮೂಹೂರ್ತ
- ಅಕ್ಟೋಬರ್ 18, 2026 (ಭಾನುವಾರ) – ತುಲಾ ಸಂಕ್ರಮಣ
- ನವೆಂಬರ್ 26, 2026 (ಗುರುವಾರ) – ಹುತ್ತರಿ ಹಬ್ಬ
2026ರ ರಜೆ ಪಟ್ಟಿಯು ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ವರ್ಷಪೂರ್ತಿ ಕಾರ್ಯಯೋಜನೆ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






