ಚನ್ನರಾಯಪಟ್ಟಣ: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡನಾರ್ಹ ಎಂದು ವಿಶ್ವಹಿಂದೂ ಪರಿಷತ್ ಹಾಸನ ವಿಭಾಗದ ಕಾರ್ಯದರ್ಶಿ ಬಿ.ಕೆ. ಮಹಿಪಾಲ್ ತಿಳಿಸಿದರು .
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘1971ರಲ್ಲಿ ಬಾಂಗ್ಲಾ ದೇಶದ ಉದಯಕ್ಕೆ ಭಾರತದ ಕೊಡುಗೆ ಅಪಾರವಾದುದು. ಭಾರತ ನೀಡಿದ ಸಹಕಾರವನ್ನು ಬಾಂಗ್ಲಾ ಎಂದಿಗೂ ಮರೆಯುವಂತಿಲ್ಲ. ಆದರೆ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಲ್ಲಿನ ಸರ್ಕಾರ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ. ಬಾಂಗ್ಲಾ ದೇಶದಲ್ಲಿ ಶೇ 8ರಷ್ಟಿರುವ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳನ್ನು ರಕ್ಷಣೆ ಮಾಡಬೇಕು’ ಎಂದರು.
ಭಾರತದಲ್ಲಿ 5 ಕೋಟಿ ಬಾಂಗ್ಲಾ ಅಕ್ರಮ ವಲಸಿಗರು ನೆಲೆಸಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಕೇರಳ, ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿರುವ ಬಾಂಗ್ಲಾ ಅಕ್ರಮ ವಲಸಿಗರನ್ನು ಗುರುತಿಸಿ ಕೂಡಲೇ ವಾಪಸ್ ಕಳುಹಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
ಬಾಂಗ್ಲಾ ದೇಶದ ಅಕ್ರಮ ವಲಸಿಗರನ್ನು ಕರ್ನಾಟಕದಿಂದ ಹೊರಹಾಕಲು ಒತ್ತಾಯಿಸಲು ಜ.2ರಂದು ಸ್ವಯಂಪ್ರೇರಿತ ಚನ್ನರಾಯಪಟ್ಟಣ ಬಂದ್ಗೆ ಕರೆ ನೀಡಲಾಗಿದೆ. ಇದಕ್ಕೆ ಹಿಂದೂಪರ ಸಂಘಟನೆಗಳು, ಕನ್ನಡಪರ ಹಾಗೂ ದಲಿತಪರ ಸಂಘಟನೆಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಕಾರ್ಯದರ್ಶಿಮಹಿಪಾಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಬೆಕ್ಕ, ಹಿಂದು ಕಮೆಂಡರ್ ತಾಲೂಕು ಅಧ್ಯಕ್ಷ ಜಯರಾಮ್, ಬಜರಂಗದಳ ಮುಖಂಡ ಆನಂದ್ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ ಕೆ
