ಶ್ಲೋಕ – 07
ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ ।
ಮಯ್ಯರ್ಪಿತಮನೋಬುದ್ಧಿರ್ಮಾಮೇವೈಷ್ಯಸ್ಯಸಂಶಯಮ್ ॥೭॥
ತಸ್ಮಾತ್ ಸರ್ವೇಷು ಕಾಲೇಷು ಮಾಮ್ ಅನುಸ್ಮರ ಯುಧ್ಯ ಚ ।
ಮಯಿ ಅರ್ಪಿತ ಮನಃ ಬುದ್ಧಿಃ ಮಾಮ್ ಏವ ಏಷ್ಯಸಿ ಅಸಂಶಯಃ –ಅದರಿಂದ ಎಲ್ಲ ಕಾಲದಲ್ಲು ನನ್ನನ್ನು ನೆನೆ. ನೆನೆಯುತ್ತ ಹೋರಾಡು. ನಿನ್ನೆಲ್ಲ ಬಯಕೆ ನಿರ್ಧಾರಗಳು ನನ್ನ ಕುರಿತಾದಾಗ ನಿಶ್ಚಯವಾಗಿ ನನ್ನನ್ನೆ ಸೇರುವೆ.
ದೇವರನ್ನು ಸ್ಮರಣೆ ಮಾಡುವ ಕಾಲ ಅಂತ ಒಂದಿಲ್ಲ. ಕೃಷ್ಣ ಹೇಳುತ್ತಾನೆ “ಸರ್ವ ಕಾಲದಲ್ಲೂ ನನ್ನನ್ನು ಸ್ಮರಣೆ ಮಾಡು” ಎಂದು. ಪ್ರತಿಯೊಂದು ಕ್ರಿಯೆ ಮಾಡುವಾಗ ಆ ಕ್ರಿಯೆ ಮಾಡಿಸುತ್ತಿರುವವ ಭಗವಂತ ಎನ್ನುವ ಎಚ್ಚರವಿರಲಿ. ಯುದ್ಧ ಮಾಡುವಾಗಲೂ ಸಹ “ಆ ಭಗವಂತ ನನ್ನೊಳಗೆ ಕೂತು ಈ ಕಾರ್ಯವನ್ನು ಮಾಡಿಸುತ್ತಿದ್ದಾನೆ, ಇದು ಅವನ ಸಂಕಲ್ಪ” ಎನ್ನುವ ಭಾವನೆ ಯುದ್ಧವನ್ನೂ ದೇವರ ಪೂಜೆಯನ್ನಾಗಿ ಪರಿವರ್ತಿಸುತ್ತದೆ! ನಮ್ಮಿಂದ ತಿಳಿದೋ ತಿಳಿಯದೆಯೋ ಆಗುವ ತಪ್ಪಿನಲ್ಲಿಯೂ ಕೂಡಾ ಭಗವಂತನ ಅರಿವು, ಶರಣಾಗತಿ ನಮಗೆ ಪಾಪದ ಲೇಪ ಬರದಂತೆ ತಡೆಯುತ್ತದೆ. ಭಗವಂತನ ಸ್ಮರಣೆಗೆ ಯಾವುದೇ ಕಾಲದ ನಿರ್ಬಂಧವಿಲ್ಲ. ಯಾವಾಗ ಭಗವಂತನ ಸ್ಮರಣೆ ಬಂತೋ ಅದೇ ಪುಣ್ಯಕಾಲ. ಭಗವಂತನ ಸ್ಮರಣೆ ಮನಸ್ಸಿನಲ್ಲಿರುವುದೇ ಮಡಿ. ಆದ್ದರಿಂದ ಭಗವಂತನ ಪೂಜಾರೂಪವಾಗಿ ಅಹಂಕಾರವಿಲ್ಲದೆ ಭಗವಂತನನ್ನು ನೆನೆದು ಕರ್ತವ್ಯ ಮಾಡಬೇಕು.
ಕ್ರಿಯೆಯಲ್ಲಿ ಇರತಕ್ಕ ಭಾವ ಧರ್ಮ-ಅಧರ್ಮವನ್ನು ನಿರ್ಣಯ ಮಾಡುತ್ತದೆ. ಉದಾಹರಣೆಗೆ ಧರ್ಮವ್ಯಾದ. ಈತ ಮಾಂಸ ಮಾರಿಯೂ ಪರಮ ಧಾರ್ಮಿಕನಾಗಿ ಬದುಕಿದ. ಏಕೆಂದರೆ ಆತನ ಅನುಸಂಧಾನ ಶುದ್ಧವಾಗಿತ್ತು. “ದೇವರು ನನ್ನನ್ನು ಈ ಕೆಲಸಕ್ಕೆ ಹಚ್ಚಿದ್ದಾನೆ, ನನ್ನ ಈ ಜನ್ಮದ ಕರ್ತವ್ಯ ಮಾಂಸ ಮಾರಿ ಬದುಕುವುದು. ಅದನ್ನು ಪ್ರಾಮಾಣಿಕವಾಗಿ ಮಾಡಿ ಜೀವನ ಸಾಗಿಸಬೇಕು” ಎನ್ನುವ ಅನುಸಂಧಾನ ಆತನಲ್ಲಿತ್ತು. ಆತ ತನ್ನ ವ್ಯಾಪಾರವನ್ನು ಕೇವಲ ತನ್ನ ಹಾಗು ತನ್ನ ಕುಟುಂಬದ ಜೀವನ ನಿರ್ವಹಣೆಗಾಗಿ ಮಾಡುತ್ತಿದ್ದ. ಈ ರೀತಿ ಪ್ರಾಮಾಣಿಕನಾಗಿ ಬದುಕಿ ಆತ ಋಷಿಗಳನ್ನೂ ಮೀರಿಸುವಷ್ಟು ಎತ್ತರಕ್ಕೇರಿದ. ಆದ್ದರಿಂದ ಭಾವ ಶುದ್ಧಿ ಅತ್ಯಂತ ಶ್ರೇಷ್ಠ. ಹಾಗಾಗಿ ನಾವು ನಮ್ಮ ಮನಸ್ಸು ಮತ್ತು ಬುದ್ಧಿಯನ್ನು ಭಗವಂತನಲ್ಲಿ ನೆಲೆ ನಿಲ್ಲಿಸಬೇಕು. “ಆಗ ನಿಸಂಶಯವಾಗಿ ನನ್ನನ್ನು ಸೇರುವೆ” ಎನ್ನುತ್ತಾನೆ ಕೃಷ್ಣ.

[…] ಇದನ್ನು ಓದಿ: ಭಗವದ್ಗೀತೆ ಅಧ್ಯಾಯ 8 ಶ್ಲೋಕ-7..! […]