ಬೆಂಗಳೂರು: ರಾಜ್ಯಾದ್ಯಂತ ವಾಹನ ತಪಾಸಣೆ ಹಾಗೂ ಪರಿಶೀಲನೆ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಪೊಲೀಸರು ಅಸಭ್ಯವಾಗಿ ವರ್ತಿಸುತ್ತಿರುವುದು, ಕಿರುಕುಳ, ಹಲ್ಲೆ, ಅವಾಚ್ಯ ಶಬ್ದಗಳ ಬಳಕೆ ಹಾಗೂ ಅಧಿಕಾರ ದುರ್ಬಳಕೆ ಮಾಡುತ್ತಿರುವ ಕುರಿತು ನಿರಂತರ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ರಾಜ್ಯ ಪೊಲೀಸ್ ಇಲಾಖೆಯು ಕಠಿಣ ಸೂಚನೆಗಳನ್ನು ಹೊರಡಿಸಿದೆ.
ವಾಹನ ತಪಾಸಣೆ ವೇಳೆ ವಾಹನ ಚಾಲಕರೊಂದಿಗೆ ಗೌರವಯುತ ಹಾಗೂ ಸೌಜನ್ಯದಿಂದ ವರ್ತಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆರ್. ಹಿತೇಂದ್ರ, ಐಪಿಎಸ್, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು (ಸಂಚಾರ ಮತ್ತು ರಸ್ತೆ ಸುರಕ್ಷತೆ), ಬೆಂಗಳೂರು ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಶಿಸ್ತಿನ ಇಲಾಖೆಯ ಗೌರವಕ್ಕೆ ಧಕ್ಕೆ
ಆದೇಶದಲ್ಲಿ ಉಲ್ಲೇಖಿಸಿರುವಂತೆ, ರಾಜ್ಯ ಪೊಲೀಸ್ ಇಲಾಖೆ ಶಿಸ್ತಿನ ಹಾಗೂ ಗೌರವಾನ್ವಿತ ಸಂಸ್ಥೆಯಾಗಿದ್ದು, ಕೆಲ ಪೊಲೀಸ್ ಸಿಬ್ಬಂದಿಗಳು ತೋರುತ್ತಿರುವ ದುರ್ನಡತೆ, ಆವೇಶಭರಿತ ವರ್ತನೆ ಮತ್ತು ಅಧಿಕಾರ ದುರ್ಬಳಕೆಗಳಿಂದಾಗಿ ಸಂಪೂರ್ಣ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ ಎಂದು ಹೇಳಲಾಗಿದೆ.
ಈ ಕುರಿತು ಹಿಂದೆ ಹಲವು ಬಾರಿ ಸುತ್ತೋಲೆಗಳು, ಜ್ಞಾಪನ ಪತ್ರಗಳು ಹಾಗೂ ಸೂಚನೆಗಳನ್ನು ನೀಡಿದ್ದರೂ ಸಹ, ಕೆಲವು ಪೊಲೀಸ್ ಸಿಬ್ಬಂದಿಗಳು ವಾಹನ ತಪಾಸಣೆಯ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆ ದೌರ್ಜನ್ಯ, ಕಿರುಕುಳ, ಹಲ್ಲೆ, ಅವಹೇಳನಕಾರಿ ಹಾಗೂ ಅವಾಚ್ಯ ಶಬ್ದಗಳ ಬಳಕೆ ಮಾಡುತ್ತಿರುವ ಘಟನೆಗಳು ಮುಂದುವರಿದಿರುವುದು ಆತಂಕಕಾರಿಯಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನು ಓದಿ: ಹೃದಯದ ಆರೋಗ್ಯಕ್ಕೆ ಮಲಗುವ ಭಂಗಿಯ ಮಹತ್ವ – ಎಡಭಾಗದಲ್ಲಿ ಮಲಗುವುದು ಹೇಗೆ ರಕ್ಷಿಸುತ್ತದೆ?
ರಾಜ್ಯಾದ್ಯಂತ ನಡೆದ ಗಂಭೀರ ಘಟನೆಗಳು
ಇತ್ತೀಚಿನ ದಿನಗಳಲ್ಲಿ ವಾಹನ ತಪಾಸಣೆಗೆ ಸಂಬಂಧಿಸಿದ ಕೆಲವು ಗಂಭೀರ ಘಟನೆಗಳು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿವೆ.
ಮಂಡ್ಯ ಜಿಲ್ಲೆಯಲ್ಲಿ ಸಂಚಾರಿ ಪೊಲೀಸರ ತಪಾಸಣೆ ವೇಳೆ ಮಗು ಮೃತಪಟ್ಟ ಪ್ರಕರಣ, ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಸಾರಿಗೆ ಬಸ್ ಚಾಲಕನ ಮೇಲೆ ಪೊಲೀಸ್ ಪೇದೆ ನಡೆಸಿದ ಹಲ್ಲೆ, ಚಿತ್ರದುರ್ಗದಲ್ಲಿ ವಾಹನ ಪರಿಶೀಲನೆಯ ವೇಳೆ ಪೊಲೀಸ್ ಸಿಬ್ಬಂದಿಯಿಂದ ಕಿರುಕುಳಕ್ಕೆ ಒಳಗಾದ ಆಟೋ ಚಾಲಕ ಮನನೊಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ, ಸಂಡೂರಿನಲ್ಲಿ ಲಾರಿ ಚಾಲಕನ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರು ದೌರ್ಜನ್ಯವೆಸಗಿದ ಪ್ರಕರಣ ಸೇರಿದಂತೆ ಅನೇಕ ಘಟನೆಗಳು ದಿನನಿತ್ಯ ಮರುಕಳಿಸುತ್ತಿರುವುದು ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ವಿರುದ್ಧ ಅಸಮಾಧಾನಕ್ಕೆ ಕಾರಣವಾಗುತ್ತಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕರ ನಂಬಿಕೆ ಕಾಪಾಡಲು ನಿರ್ದೇಶನ
ಈ ಎಲ್ಲ ಹಿನ್ನೆಲೆಗಳನ್ನು ಪರಿಗಣಿಸಿ, ಮುಂದೆ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ವಾಹನ ತಪಾಸಣೆ, ಪರಿಶೀಲನೆ ಹಾಗೂ ದಂಡ ವಸೂಲಾತಿ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ವಾಹನ ಚಾಲಕರೊಂದಿಗೆ ಸೌಜನ್ಯದಿಂದ, ಗೌರವಯುತವಾಗಿ ಮಾತನಾಡಬೇಕು. ದಂಡದ ಮೊತ್ತ ವಸೂಲಿ ಮಾಡುವಾಗ ಕಾನೂನಿನ ಚೌಕಟ್ಟಿನೊಳಗೆ ಮಾತ್ರ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತ ಹಾಗೂ ನ್ಯಾಯಸಮ್ಮತ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಉಲ್ಲಂಘನೆಗೆ ಕಠಿಣ ಕ್ರಮ
ಈ ಆದೇಶವನ್ನು ಉಲ್ಲಂಘಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಕೂಡ ಪೊಲೀಸ್ ಇಲಾಖೆ ನೀಡಿದೆ. ಪೊಲೀಸ್ ಇಲಾಖೆಯ ಗೌರವ ಮತ್ತು ಸಾರ್ವಜನಿಕರ ನಂಬಿಕೆಯನ್ನು ಕಾಪಾಡುವುದು ಪ್ರತಿಯೊಬ್ಬ ಸಿಬ್ಬಂದಿಯ ಕರ್ತವ್ಯ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.

