ಶ್ಲೋಕ – 11
ಹೀಗೆ ಭ್ರುಮಧ್ಯೆ ಜೀವವನ್ನು ತಂದು ನಿಲ್ಲಿಸುವ ವಿಧಾನವನ್ನು ವಿವರಿಸಿದ ಕೃಷ್ಣ, ಅಲ್ಲಿಂದ ಮುಂದೆ ಸಹಸ್ರಾರದ ಶಕ್ತಿ ಕೇಂದ್ರದ ದ್ವಾರದ ಮೂಲಕ ಜೀವ ಹೊರ ಹೋಗುವ ವಿಧಾನವನ್ನು ಇನ್ನೂ ವಿವರವಾಗಿ ಮುಂದಿನ ಮೂರು ಶ್ಲೋಕದಲ್ಲಿ ವಿವರಿಸುತ್ತಾನೆ.
ಯದಕ್ಷರಂ ವೇದವಿದೋ ವದಂತಿ ವಿಶಂತಿ ಯದ್ ಯತಯೋ ವೀತರಾಗಾಃ ।
ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ ತತ್ ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ ॥೧೧॥
ಯತ್ ಅಕ್ಷರಂ ವೇದವಿದಃ ವದಂತಿ ವಿಶಂತಿ ಯತ್ ಯತಯಃ ವೀತ ರಾಗಾಃ ।
ಯತ್ ಇಚ್ಛಂತಃ ಬ್ರಹ್ಮಚರ್ಯಮ್ ಚರಂತಿ ತತ್ ತೇ ಪದಮ್ ಸಂಗ್ರಹೇಣ ಪ್ರವಕ್ಷ್ಯೇ –ವೇದ ಬಲ್ಲವರು ಅಳಿವಿರದ ಅದನ್ನು ‘ಅಕ್ಷರ’ ಎನ್ನುತ್ತಾರೆ. ಭೋಗದ ಒಲವು ತೊರೆದ ಸಾಧಕರು ಅದನ್ನೇ ಸೇರುತ್ತಾರೆ. ಅದನ್ನು ಸೇರಬಯಸಿಯೆ ಬಗೆಯಲ್ಲಿ ಆ ಹಿರಿಯ ತತ್ವವನ್ನು ಚಿಂತಿಸುತ್ತಾರೆ. ಅಂಥ ಮುಕ್ತಿಪ್ರದವಾದ ಪರತತ್ವವನ್ನುನಿನಗೆ ಅಡಕವಾಗಿ ಹೇಳುತ್ತೇನೆ.
ಕೃಷ್ಣ ಹೇಳುತ್ತಾನೆ “ಯೋಗ ಸಾಧನೆಯಿಂದ ಭ್ರುಮಧ್ಯೆ ತಂದು ನಿಲ್ಲಿಸಿದ ಜೀವವನ್ನು ಅಲ್ಲಿಂದ ಧ್ಯಾನ ಮಾಡುತ್ತಾ ಮೇಲಕ್ಕೆ ಸಹಸ್ರಾರದತ್ತ ತೆಗೆದುಕೊಂಡು ಹೋಗಬೇಕು” ಎಂದು. ಈ ಕಾಲದಲ್ಲಿ ಧ್ಯಾನ ಮಾಡಬೇಕಾದ ರೂಪದ ಬಗ್ಗೆ ಹೇಳುತ್ತಾ ಕೃಷ್ಣ ಹೇಳುತ್ತಾನೆ “ವೇದವನ್ನು ಬಲ್ಲವರು ಅದನ್ನು ಅಳಿವಿರದ ‘ಅಕ್ಷರ’(ಓಂಕಾರ ಎನ್ನುವ ಅಕ್ಷರದಿಂದ ಪ್ರತಿಪಾಧ್ಯನಾದ ಸರ್ವಶಬ್ದ ವಾಚ್ಯ) ಎನ್ನುತ್ತಾರೆ” ಎಂದು.
ಮಹಾ ಪ್ರಯತ್ನದಿಂದ ಭಗವಂತನನ್ನು ಒಲಿಸಿಕೊಂಡವರು, ಪ್ರಾಪಂಚಿಕ ಸೆಳೆತದಿಂದ ಪಾರಾದವರು, ಆ ಭಗವಂತನನ್ನು ಹೋಗಿ ಸೇರುತ್ತಾರೆ. “ಅವರು ಅಂತಹ ಭಗವಂತನನ್ನು ತಿಳಿದುಕೊಳ್ಳಬಯಸಿ ಬ್ರಹ್ಮಚರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ” ಎನ್ನುತ್ತಾನೆ ಕೃಷ್ಣ. [ಇಲ್ಲಿ ‘ಬ್ರಹ್ಮಚರ್ಯ’ ಎಂದರೆ ನಿಘಂಟಿನಲ್ಲಿ ಹೇಳುವ ದೈಹಿಕ ಬ್ರಹ್ಮಚರ್ಯವಲ್ಲ, ಬದಲಿಗೆ ‘ಬ್ರಹ್ಮಣಿ ಚರಣಂ’-ಭಗವಂತನಲ್ಲಿ ಮನಸ್ಸು ನೆಲೆಗೊಳ್ಳುವಿಕೆ-ಬ್ರಹ್ಮಚರ್ಯ]. “ಅದನ್ನು ಸೇರಬಯಸಿಯೆ ಬಗೆಯಲ್ಲಿ ಆ ಹಿರಿಯ ತತ್ವವನ್ನು ಚಿಂತಿಸುತ್ತಾರೆ. ಈ ರೀತಿ ಮೋಕ್ಷವನ್ನು ಪಡೆಯುವ ಪ್ರಕ್ರಿಯೆಯನ್ನು ಸಂಗ್ರಹವಾಗಿ ನಿನಗೆ ಹೇಳುತ್ತೇನೆ” ಎಂದು ಹೇಳಿ ಕೃಷ್ಣ ಈ ಪ್ರಕ್ರಿಯೆಯನ್ನು ಮುಂದಿನ ಶ್ಲೋಕಗಳಲ್ಲಿ ಅರ್ಜುನನಿಗೆ ವಿವರಿಸುತ್ತಾನೆ.

[…] ಭಗವದ್ಗೀತೆ ಅಧ್ಯಾಯ- 8, ಶ್ಲೋಕ-11 […]