ಚನ್ನರಾಯಪಟ್ಟಣ: ಲೋಕ ಕಲ್ಯಾಣಾರ್ಥವಾಗಿ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕತ್ತರಿಘಟ್ಟದಲ್ಲಿರುವ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ 22ನೇ ವರ್ಷದ ಮಹಾ ಚಂಡಿಕಾ ಯಾಗವು ಸೋಮವಾರ ಭಕ್ತಿಭಾವದಿಂದ ನೆರವೇರಿತು. ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಜನವರಿ 4ರಂದು ಮಹಾಗಣಪತಿ ಹೋಮ, ಪುಣ್ಯಾಹವಾಚನ, ಅಂಕುರಾರ್ಪಣೆ, ದುರ್ಗಾಸಪ್ತಶತಿ ಪಾರಾಯಣ ಹಾಗೂ ಮಹಾಮಂಗಳಾರತಿ ನೆರವೇರಿದವು. ಯಾಗದ ದಿನವಾದ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮಹಾ ಚಂಡಿಕಾ ಯಾಗ ಪ್ರಾರಂಭವಾಗಿ, ಮಧ್ಯಾಹ್ನ 12 ಗಂಟೆಗೆ ಮಹಾಪೂರ್ಣಾಹುತಿ ಹಾಗೂ ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು. ಚನ್ನರಾಯಪಟ್ಟಣದ ಕಲಾಪರಿವಾರ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಎಲ್ಲಾ ಧರ್ಮಗಳೂ ಶಾಂತಿಯ ಸಂದೇಶ ಸಾರುತ್ತವೆ. ಮಾನವನು ಶಾಂತಿ ಮತ್ತು ನೆಮ್ಮದಿಯಿಂದ ಬದುಕಬೇಕು ಎಂಬುದೇ ಧರ್ಮಗಳ ಆಶಯ. ಮೋಕ್ಷ ಸಾಧನೆಗಾಗಿ ಕೋಪವನ್ನು ತ್ಯಜಿಸಬೇಕು. ಕೋಪದಿಂದ ಅನೇಕ ಅನಾಹುತಗಳು ಸಂಭವಿಸುತ್ತಿವೆ. ಪ್ರಕೃತಿ ಬದಲಾವಣೆಗಳು ಮಾನವನಿಗೆ ಮಾರಕವಾಗುತ್ತಿದ್ದು, ಅತಿಯಾದ ಆಸೆ ಮತ್ತು ಸ್ವಾರ್ಥದಿಂದ ಸಂಬಂಧಗಳು ಹಳಸುತ್ತಿವೆ ಎಂದು ಹೇಳಿದರು.
ಇದನ್ನು ಓದು: ಚನ್ನರಾಯಪಟ್ಟಣ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯ–ಜಿಲ್ಲಾ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ
ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಸಮಾಜದ ಕುಸಿತದ ಸೂಚನೆ. ಹಣದ ಹಿಂದೆ ಓಡುವ ಜೀವನದಿಂದ ತಂದೆ–ತಾಯಿಯನ್ನು ಮನೆಯಲ್ಲಿ ಇಟ್ಟುಕೊಳ್ಳದೆ ವೃದ್ಧಾಶ್ರಮಗಳಿಗೆ ಕಳುಹಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ಭಾರತೀಯ ಸಂಸ್ಕೃತಿಯಲ್ಲ. ಕುಟುಂಬದ ಸದಸ್ಯರು ಒಟ್ಟಾಗಿ ಬದುಕಿ, ಸುಖ–ದುಃಖಗಳನ್ನು ಹಂಚಿಕೊಳ್ಳಬೇಕು. ನಗರೀಕರಣದಿಂದ ಮಣ್ಣಿನ ಸಂಸ್ಕೃತಿ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ವಿಚ್ಛೇದನಗಳು ಹೆಚ್ಚುತ್ತಿದ್ದು, ಕುಟುಂಬ ಜೀವನದ ನೆಮ್ಮದಿ ಹಾಳಾಗುತ್ತಿದೆ ಎಂದರು.
ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ ಗುರೂಜಿ ಮಾತನಾಡಿ, ಮಾನವ ಆರೋಗ್ಯ ಮತ್ತು ಮಾನಸಿಕ ಶಾಂತಿ ಉದ್ದೇಶದಿಂದ ಹಿರೀಸಾವೆ, ನುಗ್ಗೇಹಳ್ಳಿ, ಶ್ರವಣಬೆಳಗೊಳ ಹೋಬಳಿ ಕೇಂದ್ರಗಳಲ್ಲಿ ಯೋಗ ತರಬೇತಿ ಹಾಗೂ ಆಯುರ್ವೇದ ಚಿಕಿತ್ಸೆಯ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಮಠ–ಆಶ್ರಮಗಳು ನೊಂದವರ ಪಾಲಿಗೆ ನೆಮ್ಮದಿ ತಾಣಗಳಾಗಿವೆ. ದೇಹದ ಶುದ್ಧಿಯ ಜೊತೆಗೆ ಅಂತರಂಗದ ಶುದ್ಧಿಯೂ ಅಗತ್ಯ. ಇಂದಿನ ದಿನಗಳಲ್ಲಿ ಸಂಬಂಧಗಳಿಗಿಂತ ಹಣ ಮತ್ತು ವಸ್ತುಗಳಿಗೆ ಹೆಚ್ಚಿನ ಮೌಲ್ಯ ನೀಡಲಾಗುತ್ತಿದೆ ಎಂದು ವಿಷಾದಿಸಿದರು.
ಸಮಾರಂಭದಲ್ಲಿ ತಾಲೂಕು ಹಿಂದೂ ದೇವಾಲಯ ಅರ್ಚಕ ಸಂಘದ ಅಧ್ಯಕ್ಷ ಶ್ರೀಧರಮೂರ್ತಿ ಗುರೂಜಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ನಂಜಪ್ಪ, ಮುಖಂಡರಾದ ಉಮಾಮಹೇಶ್, ಚಂದ್ರಶೇಖರ್, ತಿಮ್ಮಪ್ಪ, ಮಹದೇವಪ್ಪ, ಆನಂದ್, ಅಮೋಘ್ ಸೇರಿದಂತೆ ಹಲವರು ಭಾಗವಹಿಸಿದ್ದರು.
– ಮಂಜುನಾಥ್ ಐ.ಕೆ

[…] ಇದನ್ನು ಓದಿ:Watch Video- ಚನ್ನರಾಯಪಟ್ಟಣ: ಲೋಕ ಕಲ್ಯಾಣಾರ್ಥವಾಗ… […]