ಆಲೂರು: ಭೀಮ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಲೂರು ನಗರದಲ್ಲಿ 208ನೇ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಕಲೇಶಪುರ–ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರು ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಭೀಮ ಕೋರೆಗಾಂವ್ ವಿಜಯೋತ್ಸವವು ಶೌರ್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿದ್ದು, ದಲಿತ ಸಮುದಾಯದ ಆತ್ಮಗೌರವ ಹಾಗೂ ಹೋರಾಟದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಸಾರುವ ಮಹತ್ವದ ಆಚರಣೆ ಎಂದು ಅವರು ಹೇಳಿದರು.

ಸಮಾಜದಲ್ಲಿ ಸಮಾನ ಅವಕಾಶಗಳು, ಶೈಕ್ಷಣಿಕ ಪ್ರಗತಿ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಶಾಸಕರು ಕರೆ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸಬೇಕೆಂದರು.
ಕಾರ್ಯಕ್ರಮದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ವಿಜಯೋತ್ಸವಕ್ಕೆ ಉತ್ಸಾಹಭರಿತ ಬೆಂಬಲ ನೀಡಿದರು.
