ಕೆ.ಆರ್.ಪೇಟೆ.ಜ.08: ತಾಲ್ಲೂಕಿನ ಮೊಸಳೇಕೊಪ್ಪಲು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಸುಮಾರು ಎರಡೂವರೆ ಕೋಟಿ ರೂಪಾಯಿಗಳ ವಿಶೇಷ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ಅಭಿವೃದ್ದಿ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಹಾಗೂ ಹೈಮಾಸ್ಕ್ ಬೀದಿ ದೀಪ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಹೆಚ್.ಟಿ.ಮಂಜು ಅವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು ರಾಜ್ಯ ಸರ್ಕಾರವು ಮಂಡ್ಯ ಜಿಲ್ಲೆಯ ಏಳು ತಾಲ್ಲೂಕುಗಳ ಪೈಕಿ 6 ತಾಲ್ಲೂಕುಗಳ ಶಾಸಕರ ಪ್ರದೇಶಾಭಿವೃದ್ಧಿ ಅನುಧಾನ ತಲಾ 50ಕೋಟಿ ಜೊತೆಗೆ ವಿಶೇಷ ಅನುಧಾನವಾಗಿ ನೂರಾರು ಕೋಟಿ ರೂಪಾಯಿಗಳನ್ನು ನೀಡಿದೆ. ಆದರೆ ಜೆಡಿಎಸ್ ಶಾಸಕ ಎಂಬ ಕಾರಣಕ್ಕಾಗಿ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಕೇವಲ 25ಕೋಟಿ ಅನುಧಾನ ನೀಡಿ ತಾರತಮ್ಯ ಮಾಡುತ್ತಿದೆ ಇದರಿಂದ ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಬಗ್ಗೆ ಚರ್ಚೆ ನಡೆಸುವ ಸಭೆಗೆ ಮಂಡ್ಯ ಜಿಲ್ಲೆಯ ಶಾಸಕರ ಸಭೆ ಕರೆಯುವಾಗ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷದ 6ಮಂದಿ ಶಾಸಕರನ್ನು ಮಾತ್ರ ಸಭೆಗೆ ಕರೆಯುತ್ತಾರೆ. ನನಗೆ ಆಹ್ವಾನವನ್ನೇ ನೀಡುವುದಿಲ್ಲ ಎಂದು ಶಾಸಕ ಹೆಚ್.ಟಿ.ಮಂಜು ಸಿಎಂ ವಿರುದ್ದ ಬೇಸರ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳು ಈ ತಾರತಮ್ಯವನ್ನು ಹೋಗಲಾಡಿಸಿ ಎಲ್ಲಾ ತಾಲ್ಲೂಕುಗಳಂತೆ ನಮ್ಮ ತಾಲ್ಲೂಕಿಗೂ ಅವರಷ್ಟೇ ಅನುಧಾನ ನೀಡಿ ಅಭಿವೃದ್ಧಿಗೆ ಸಹಕಾರ ನೀಡಬೇಕು. ನಮ್ಮ ಕುಮಾರಣ್ಣ, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಆಡಳಿತ-ವಿರೋಧ ಪಕ್ಷದ ಎಲ್ಲಾ ಶಾಸಕರಿಗೂ ಒಂದೇ ರೀತಿಯ ಅನುಧಾನ ನೀಡುತ್ತಿದ್ದರು. ಯಾವುದೇ ತಾರತಮ್ಮ ಮಾಡುತ್ತಿರಲಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಘೋಷಿತ ಐದು ಗ್ಯಾರಂಟಿ ಯೋಜನೆಗಳಿಗೆ ಅನುಧಾನವನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಮೂಲಭೂತ ಸೌಲಭ್ಯಗಳಿಗೆ ಅನುಧಾನದ ಕೊರತೆ ಎದುರಾಗಿದೆ. ಇದು ನಮ್ಮ ಕೆ.ಆರ್.ಪೇಟೆ ತಾಲ್ಲೂಕಿಗೂ ತುಂಬಾ ಹೊಡೆತ ಬಿದ್ದಿದೆ. ಮುಂದಿನ ದಿನಗಳಲ್ಲಿಯಾದರೂ ಮೂಲಭೂತ ಸೌಲಭ್ಯಗಳಾದ ಕೃಷಿ, ನೀರಾವರಿ, ರಸ್ತೆ, ಸೇತುವೆಗಳ ಅಭಿವೃದ್ದಿ, ಕೆರೆ ಕಟ್ಟೆಗಳ ಅಭಿವೃದ್ಧಿಗೆ ಅನುಧಾನ ನೀಡಲಿ ಹಾಗೂ ಗ್ರಾಮೀಣ ಜನರಿಗೆ ಆಶ್ರಯ ಮನೆಗಳನ್ನು ನೀಡಲಿ ಎಂದು ಶಾಸಕ ಎಚ್.ಟಿ.ಮಂಜು ಸರ್ಕಾರವನ್ನು ಒತ್ತಾಯ ಮಾಡಿದರು.

ಇದನ್ನು ಓದು: ಕೆ.ಆರ್.ಪೇಟೆ:ಗೂಡೇಹೊಸಹಳ್ಳಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ
ಮೈತ್ರಿ ಬಗ್ಗೆ ವರಿಷ್ಟರ ತೀರ್ಮಾನಕ್ಕೆ ಬದ್ದ: ತಾಲ್ಲೂಕಿನಲ್ಲಿ ಜೆಡಿಎಸ್ ಸುಭದ್ರವಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅಥವಾ ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ನಮ್ಮ ಜೆಡಿಎಸ್ ಪಕ್ಷದ ವರಿಷ್ಠರರಾದ ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಕುಮಾರಣ್ಣ ಅವರ ನಿರ್ದೇಶನ ಪಡೆದುಕೊಂಡು ಮುಂದುವರೆಯುವುದಾಗಿ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಅವರು ತಿಳಿಸಿದ್ದಾರೆ. ಸ್ಥಳೀಯ ಮಾಜಿ ಸಚಿವರಾದ ನಾರಾಯಣಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಮೈತ್ರಿ ಸಂಬಂಧ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯುವಷ್ಟು ದೊಡ್ಡವನಲ್ಲ ನಾನೊಬ್ಬ ಸಾಮಾನ್ಯ ಶಾಸಕ ಎನ್ನುವ ಮೂಲಕ ಉತ್ತರ ನೀಡಲು ನೀರಾಕರಿಸಿದರು. ಬಿಜೆಪಿಯೊಂದಿಗೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಗಟ್ಟಿಯಾಗಿದೆ. ಆದರೆ ಸ್ಥಳೀಯವಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪುರಸಭೆ, ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಗೆ ಸ್ಪರ್ಧಿಸಬೇಕೋ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಬೇಕೋ ಎಂಬುದನ್ನು ವರಿಷ್ಠರ ಬಳಿ ಚರ್ಚಿಸಿದ ನಂತರವೇ ವರಿಷ್ಠರ ತೀರ್ಮಾನದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಶಾಸಕರು ಸ್ಪಷ್ಟವಾಗಿ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಯಜಮಾನರುಗಳಾದ ಪಟೇಲ್ ನಿಂಗೇಗೌಡ, ರಾಮಕೃಷ್ಣೇಗೌಡ, ನಾಗೇಗೌಡ, ಸೆಕ್ರೆಟರಿ ಚಂದ್ರೇಗೌಡ, ಬಸವೇಗೌಡ, ರಂಗೇಗೌಡ, ರಾಮಕೃಷ್ಣೇಗೌಡ, ರಮೇಶ್, ರಾಜೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಧ್ಯಕ್ಷ ಕಾಳೇಗೌಡ, ಗ್ರಾ.ಪಂ.ಸದಸ್ಯರಾದ ಅನುರಾಧಾಮಂಜುನಾಥ್, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನಿರ್ಮಲೇಶ್, ಬಳ್ಳೇಕೆರೆ ಗ್ರಾಮ ಪಂಚಾಯಿತಿ ಪಿಡಿಒ ಪ್ರವೀಣ್, ಮುಖಂಡರಾದ ನಾಟನಹಳ್ಳಿ ಬೋರ್ವೆಲ್ ಮಹೇಶ್, ನಾರ್ಗೋನಹಳ್ಳಿ ಸುಧಾಕರ್, ಕೆಂಪಣ್ಣನ ರವಿ, ಕೆ.ಆರ್.ಪೇಟೆ ತಾಲ್ಲೂಕಿನ ಮೈಸೂರು ನಿವಾಸಿಗಳ ಸಂಘದ ಕೋಶಾಧ್ಯಕ್ಷ ಕುಮಾರ್ ಸೇರಿದಂತೆ ಹಲವಾರು ಮುಖಂಡರು, ಗ್ರಾಮಸ್ಥರು, ಯುವ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಭೂಮಿಪೂಜೆಗೆ ಶಾಸಕ ಹೆಚ್.ಟಿ.ಮಂಜು ಅವರು ಗ್ರಾಮಕ್ಕೆ ಆಗಮಿಸಿದಾಗ ಗ್ರಾಮದ ಯಜಮಾನರುಗಳು ಹಾಗೂ ಗ್ರಾಮಸ್ಥರು ಶಾಸಕರಿಗೆ ಪುಷ್ಪಮಾಲೆ ಹಾಕಿ ಫಲತಾಂಭೂಲ ನೀಡಿ ಸನ್ಮಾನಿಸುವ ಮೂಲಕ ಅದ್ದೂರಿ ಸ್ವಾಗತ ಕೋರಿದರು. ಶಾಸಕರಿಗೆ ಮಹಿಳೆಯರು ಆರತಿ ಎತ್ತಿ ಹಣೆಗೆ ತಿಲಕವಿಟ್ಟು ಸ್ವಾಗತ ಕೋರಿದರು.
– ಶ್ರೀನಿವಾಸ್ ಆರ್.
