ಕೆ.ಆರ್.ಪೇಟೆ: ಶಿಕ್ಷಕರು ಅರ್ಹತಾ ಪರೀಕ್ಷೆ ಎದುರಿಸಿ ತೇರ್ಗಡೆ ಹೊಂದಬೇಕು. ನಂತರ ಕರ್ತವ್ಯದಲ್ಲಿ ಮುಂದುವರೆಯಬೇಕು ಎಂದು ತೀರ್ಪು ನೀಡಿರುವ ಸುಪ್ರಿಂ ಕೋರ್ಟಿನ ತೀರ್ಪನ್ನು ವಿರೋಧಿಸಿ ತಾಲ್ಲೂಕಿನ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.
ಇಂದು ದೇಶಾದ್ಯಂತ ರಾಷ್ಡ್ರೀಯ ಶಿಕ್ಷಕರ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕರೆಯ ಮೇರೆಗೆ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರು ಬೆಳಿಗ್ಗೆ 10ಗಂಟೆಯಿಂದ ಸಂಜೆ 4.20ವರೆಗೆ ಕೈಗೆ ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಅರ್ಹತಾ ಪರೀಕ್ಷೆ ವಿರೋಧಿಸಿದರು. ರಾಜ್ಯದ ಶಿಕ್ಷಕರಿಗೂ ಕೇಂದ್ರ ಸರ್ಕಾರದಂತೆ ಸಮಾನ ವೇತನ ನೀಡಬೇಕು ಮತ್ತು ಹೊಸ ಪಿಂಚಣಿ ಯೋಜನೆ ಬದಲಾಗಿ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಶಿಕ್ಷಕರ ಅರ್ಹತಾ ಪರೀಕ್ಷೆ ಸಂಬಂಧ ಕೇಂದ್ರ ಸರ್ಕಾರ ವಿಶೇಷ ಕಾನೂನು ಮಂಡಿಸಿ ಸುಪ್ರಿಂ ಆದೇಶಕ್ಕೆ ತಡೆ ನೀಡಬೇಕು ಹೀಗೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತಾಲ್ಲೂಕಿನಾದ್ಯಂತ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಟನಹಳ್ಳಿ ಶಾಲೆಯಲ್ಲಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದರು.

ನಾಟನಹಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾದ ಕಾಂತರಾಜು, ಹೆಚ್.ಆರ್.ಪೂರ್ಣಚಂದ್ರತೇಜಸ್ವಿ, ಗೀತಾ ಮತ್ತು ಆಶಾ ಅವರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದರು. ಅಗ್ರಹಾರಬಾಚಹಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಎ.ಹೆಚ್.ಯೋಗೇಶ್, ಶಿಕ್ಷಕರಾದ ತಮ್ಮಯ್ಯ, ನಂಜಪ್ಪ, ಶಾಂತಕುಮಾರಿ, ಪವಿತ್ರ, ಚಿಲ್ಲದಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ರಮೇಶ್, ಸಹ ಶಿಕ್ಷಕ ಕೃಷ್ಣಯ್ಯ ಇತತರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
– ಶ್ರೀನಿವಾಸ್ ಆರ್.
