ಚನ್ನರಾಯಪಟ್ಟಣ: ಸಂಕ್ರಾಂತಿ ಹಬ್ಬ ಹಾಗೂ ಐತಿಹಾಸಿಕ, ಪುರಾಣ ಪ್ರಸಿದ್ಧ ಬೂಕನಬೆಟ್ಟದ ಜಾತ್ರಾ ಮಹೋತ್ಸವದ ಅಂಗವಾಗಿ ಜ. 11 ರಂದು ಸಂಜೆ 7 ಗಂಟೆಗೆ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಅಭಿನಯಿಸಲಾಗುತ್ತಿದೆ ಎಂದು ಶ್ರೀ ಸರಸ್ವತಿ ಕಲಾ ಸಂಘದ ಗೌರವಾಧ್ಯಕ್ಷ ಮಧು ಬೆಕ್ಕ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯು ಮುಂದಿನ ಪೀಳಿಗೆಗೆ ತಲುಪಿಸುವುದು ಬಹುಮುಖ್ಯವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂಬುದು ನಮ್ಮ ಸಂಘದ ಧ್ಯೇಯೋದ್ದೇಶವಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಮಹಾ ಕಾವ್ಯಗಳಾಗಿದ್ದು, ಈ ಮಹಾಭಾರತದ ಭಗವದ್ಗೀತೆ ಭಾಗವನ್ನು ಆಯ್ದುಕೊಂಡು, ಈ ನಾಟಕವನ್ನು ಚನ್ನರಾಯಪಟ್ಟಣ ತಾಲೂಕಿನ ಪೌರಾಣಿಕ ರಂಗಕರ್ಮಿ ಸಚಿನ್ ರಂಗರಾಜು ನಿರ್ದೇಶನದಲ್ಲಿ, ಆಯ್ದ ಕಲಾವಿದರಿಂದ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಈ ಮಹಾಕಾವ್ಯಗಳಲ್ಲಿ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವ ಅತ್ಯಮೂಲ್ಯ ಸಂದೇಶಗಳಿದ್ದು, ವಿಶೇಷವಾಗಿ ನಮ್ಮ ಯುವ ಸಮುದಾಯಕ್ಕೆ, ಮುಂದಿನ ತಲೆಮಾರಿಗೆ ನಮ್ಮ ಸಂಸ್ಕೃತಿಯ ಅರಿವುಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಸರಸ್ವತಿ ಕಲಾ ಸಂಘದ ಅಧ್ಯಕ್ಷ ದ್ವಾರಕೀಶ್ ಬದ್ದಿಕೆರೆ, ಕಾರ್ಯದರ್ಶಿ ದಿನೇಶ್ ನಾರಾಯಣಪುರ ಇದ್ದರು.
ವರದಿ : ಐ ಕೆ ಮಂಜುನಾಥ್
