ಅರಸೀಕೆರೆ: “ಇದು ಬರಿ ಮಾತಲ್ಲ, ರಾಜಕೀಯ ಮಹಾಭಾರತದ ಘೋಷಣೆ. ಅರಸೀಕೆರೆಯಲ್ಲಿ ನೆಲೆ ಇಲ್ಲದವರು ಇಲ್ಲಿ ಬಂದು ಸ್ಪರ್ಧಿಸುವ ಕನಸು ಕಾಣುತ್ತಿದ್ದಾರೆ. ತಾಕತ್ತಿದ್ದರೆ 2028ರ ಚುನಾವಣೆಗೆ ಅರಸೀಕೆರೆಯಿಂದಲೇ ಸ್ಪರ್ಧಿಸಿ, ಇಲ್ಲಿನ ಜನರೇ ನಿಮಗೆ ಉತ್ತರ ನೀಡುತ್ತಾರೆ,” ಎಂದು ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ನೇರ ಪಂಥಾಹ್ವಾನ ನೀಡಿದರು.
ನಗರದಲ್ಲಿ ಶ್ರೀ ಭಕ್ತ ಕನಕದಾಸ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟೌಟ್ಗೆ ಹಾಲಿನ ಅಭಿಷೇಕ ನೆರವೇರಿಸಿ ಮಾತನಾಡಿದ ಅವರು, ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಅರಸೀಕೆರೆ ನಿಮ್ಮ ಆಸ್ತಿ ಅಲ್ಲ. ಐವತ್ತು ಜನರನ್ನು ಹಿಂದೆ ಹಾಕಿಕೊಂಡು ಬಂದು ಇಲ್ಲಿ ಸಭೆ ಮಾಡಿದರೆ ಇಲ್ಲಿನ ಜನ ಭಯಪಡುವುದಿಲ್ಲ. ಅರಸೀಕೆರೆಗೆ ನೀವು ನೀಡಿರುವ ಕೊಡುಗೆ ಶೂನ್ಯ. ನಾನು ಸೋತ ನಂತರ ಈ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವೇ ಇಲ್ಲದಂತಾಗಿದೆ. ನಾನು ಗೆದ್ದಿದ್ದು ನನ್ನ ವೈಯಕ್ತಿಕ ಶಕ್ತಿ ಮತ್ತು ಜನರ ವಿಶ್ವಾಸದಿಂದಲೇ ಹೊರತು ನಿಮ್ಮ ಬೆಂಬಲದಿಂದಲ್ಲ,” ಎಂದು ಶಿವಲಿಂಗೇಗೌಡರು ಹೇಳಿದರು.
ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡಿದ ಅವರು, “ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ಕಾಲು ಹಿಡಿದು ಅನುದಾನ ತಂದಿದ್ದೇನೆ. ಅರಸೀಕೆರೆಗೆ ಮಂಜೂರಾಗಿದ್ದ ಇಂಜಿನಿಯರಿಂಗ್ ಕಾಲೇಜನ್ನು ರಾತ್ರೋರಾತ್ರಿ ಮೊಸಳೆಹೊಸಳ್ಳಿಗೆ ಕೊಂಡೊಯ್ದ ಇತಿಹಾಸ ನಿಮ್ಮದು. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಸಂಪೂರ್ಣ ವಿವರವನ್ನು ಶೀಘ್ರವೇ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡುತ್ತೇನೆ,” ಎಂದು ಹೇಳಿದರು.
ಎತ್ತಿನಹೊಳೆ ಯೋಜನೆ ಕುರಿತಾಗಿ ಪ್ರಶ್ನೆ ಎತ್ತಿದ ಅವರು, “ಎತ್ತಿನಹೊಳೆ ನೀರು ಬಂದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದಿದ್ದಿರಲ್ಲವೇ? ಬರುವ ಜೂನ್ ತಿಂಗಳಲ್ಲಿ ನೀರು ಬಂದು ಕೆರೆಗಳು ತುಂಬಲಿವೆ. ಆಗ ನಿಮ್ಮ ಮಾತಿನಂತೆ ನಡೆದುಕೊಳ್ಳುತ್ತೀರಾ?” ಎಂದು ಸವಾಲು ಹಾಕಿದರು.
ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಟೀಕಿಸಿದ ಶಾಸಕ, “ಬರೀ ನೀವು, ನಿಮ್ಮ ಮನೆ, ನಿಮ್ಮ ಮನೆತನ ಮಾತ್ರ ಬೆಳೆಯಬೇಕೇ? ಹಾಸನ ಜಿಲ್ಲೆಯಲ್ಲಿ ಬೇರೆಯವರು ಬೆಳೆಯಬಾರದೇ? ನಾನು ಕಾಂಗ್ರೆಸ್ಗೆ ಕದ್ದುಮುಚ್ಚಿ ಹೋಗಿಲ್ಲ. ಅರಸೀಕೆರೆಯ ಜನರಿಗಾಗಿ ಬಹಿರಂಗವಾಗಿಯೇ ನಿರ್ಧಾರ ತೆಗೆದುಕೊಂಡಿದ್ದೇನೆ,” ಎಂದು ಸ್ಪಷ್ಟಪಡಿಸಿದರು.
“ನಮ್ಮ ಅಪ್ಪ ಹೆಬ್ಬೆಟ್ಟು ಒತ್ತುವ ರೈತ ಇರಬಹುದು, ಆದರೆ ಹೊಲದಲ್ಲಿ ಸಾಲು ಹೊಡೆಯುವುದು ನಮಗೆ ಚೆನ್ನಾಗಿ ಗೊತ್ತು. ಅರಸೀಕೆರೆ ಜನ ಪ್ರಬುದ್ಧರಾಗಿದ್ದಾರೆ. ಹಿಂದಿನಂತೆ ಅವರನ್ನು ಮೋಸಗೊಳಿಸಲು ಸಾಧ್ಯವಿಲ್ಲ. ನಾನು ಇರುವವರೆಗೂ ಈ ಕ್ಷೇತ್ರದಲ್ಲಿ ನಿಮ್ಮ ಆಟ ನಡೆಯದು,” ಎಂದು ಕಿಡಿಕಾರಿದರು.
2028ರ ಚುನಾವಣೆಯಲ್ಲಿ ಎಚ್.ಡಿ. ರೇವಣ್ಣ ಅವರು ಅರಸೀಕೆರೆಯಿಂದ ಸ್ಪರ್ಧಿಸಬೇಕೆಂದು ಜೆಡಿಎಸ್ ಮುಖಂಡರು ಒತ್ತಾಯಿಸುತ್ತಿರುವ ಹಿನ್ನೆಲೆ, ಶಿವಲಿಂಗೇಗೌಡರ ಈ ‘ರಣಕಳೆ’ ಹೇಳಿಕೆ ಜಿಲ್ಲಾ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
