ತುಮಕೂರು: ತುಮಕೂರು ನಗರ ಮಹಾ ನಗರಪಾಲಿಕೆಯಾಗಿದ್ದರೂ ಸ್ವಚ್ಛತೆ ನಿರ್ವಹಣೆ ಮತ್ತು ಮೂಲ ಸೌಕರ್ಯ ವಿಚಾರದಲ್ಲಿ ರಾಜ್ಯದಲ್ಲಿ ತುಂಬಾ ಹಿಂದುಳಿದ ನಗರ ಪಾಲಿಕೆ ಎಂಬ ಹಣೆಪಟ್ಟಿ ಹೊತ್ತಿರುವ ತುಮಕೂರಿಗೆ ನೂತನ ಆಯುಕ್ತರಾದ ಶುಭ ಅವರು ಆಡಳಿತ ಚುರುಕುಗೊಳಿಸಿ ನಗರಕ್ಕೆ ಹೊಸ ರೂಪ ನೀಡಲಿ ಎಂದು ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಷನ್ ಮತ್ತು ಅಕಾಡೆಮಿಯ ಅಧ್ಯಕ್ಷ ನಿಸಾರ್ ಅಹಮದ್ (ಆರಿಫ್) ಮನವಿ ಮಾಡಿದ್ದಾರೆ.
ಈ ಹಿಂದೆ ಬೆಳಗಾವಿಯಲ್ಲಿ ಆಯುಕ್ತರಾಗಿದ್ದ ಶುಭ ಅವರು ಅಲ್ಲಿನ ಅಧಿಕಾರಿ ಮತ್ತು ನೌಕರರಲ್ಲಿ ಶಿಸ್ತು ಮತ್ತು ಕರ್ತವ್ಯ ಪಾಲನೆ ಬಗ್ಗೆ ಕೈಗೊಂಡಿದ್ದ ಕ್ರಮಗಳನ್ನು ತುಮಕೂರು ಪಾಲಿಕೆಯಲ್ಲೂ ಕೈಗೊಳ್ಳಬೇಕಿದೆ. ಜಡ್ಡುಗಟ್ಟಿದ ತುಮಕೂರು ಪಾಲಿಕೆಯ ಅಧಿಕಾರಿಗಳ ಚಳಿ ಬಿಡಿಸುವ ಕೆಲಸ ಆಗಬೇಕಿದೆ. ನಗರದ 35 ವಾರ್ಡುಗಳಲ್ಲೂ ಒಂದಲ್ಲಾ ಒಂದು ಮೂಲ ಸಮಸ್ಯೆಗಳಿವೆ. ಅದರಲ್ಲೂ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಹಾಗೂ ಬಡ ಮತ್ತು ಮಧ್ಯಮ ವರ್ಗದ ಜನ ವಾಸ ಮಾಡುವ ವಾರ್ಡುಗಳಲ್ಲಿ ಸ್ವಚ್ಛತೆ ಎಂಬುದು ಮಾಯವಾಗಿದೆ. ಚರಂಡಿಗಳು ತುಂಬಿಕೊAಡಿವೆ. ಕಸ ಸಂಗ್ರಹಣಾ ವಾಹನಗಳ ಕಾರ್ಯಾಚರಣೆ ಸಂಪೂರ್ಣ ಕೈಸೋತಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆಗಳು ತುಂಬಾ ಹದಗೆಟ್ಟಿದ್ದು, ನಿದ್ದೆ ಮಂಪರಿನಲ್ಲಿರುವ ಪಾಲಿಕೆಯಲ್ಲಿನ ಅಧಿಕಾರಿ ವರ್ಗದವರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದಿದ್ದಾರೆ.
ಬೆಳಗಾವಿ ಪಾಲಿಕೆಯಲ್ಲಿ ಮಾಡಿದ ಕ್ರಾಂತಿಕಾರಿ ಕಾರ್ಯಾಚರಣೆಯನ್ನು ಶುಭ ಅವರು ತುಮಕೂರಲ್ಲೂ ಮಾಡಲಿದ್ದಾರೆ ಎಂಬ ಸಾರ್ವಜನಿಕರ ನಿರೀಕ್ಷೆ ನಿಜವಾಗಲಿ ಎಂದು ಆಶಿಸುತ್ತಾ, ನಗರದಲ್ಲಿ ಜಾತಿವಾರು ವರ್ಗವಾರು ಅಭಿವೃದ್ಧಿ ತಾರತಮ್ಯವನ್ನು ನೂತನ ಆಯುಕ್ತರಾದ ಶುಭ ಅವರು ಕೊನೆಗಾಣಿಸಲಿ ಎಂದು ಈ ಮೂಲಕ ಕೋರುತ್ತೇನೆ ಎಂದು ನಿಸಾರ್ ಅಹಮದ್ (ಆರಿಫ್) ಮನವಿ ಮಾಡಿಕೊಂಡಿದ್ದಾರೆ.
– ಕೆ.ಬಿ.ಚಂದ್ರಚೂಡ
