
ಬೆಂಗಳೂರು: ರಾಜ್ಯದಲ್ಲಿ ದಿನೇದಿನೇ ಹಕ್ಕಿಜ್ವರದ ಭೀತಿ ಹೆಚ್ಚಾಗುತ್ತಲೇ ಇದೆ. ಇದೀಗ ಹಕ್ಕಿಜ್ವರ ನಿಯಂತ್ರಣಕ್ಕಾಗಿ ಪಶುಸಂಗೋಪನೆ ಇಲಾಖೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ಕೇಂದ್ರ ಸರ್ಕಾರ ಗೈಡ್ಲೈನ್ಸ್ ಬಿಡುಗಡೆಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವೂ ಇಂದು ಗೈಡ್ಲೈನ್ಸ್ ಬಿಡುಗಡೆ ಮಾಡಿದೆ. ಹಕ್ಕಿಜ್ವರ ಹೆಚ್ಚಾಗುತ್ತಿರುವ ಸಮಯದಲ್ಲಿ ಕೋಳಿ ಸೇವನೆ ಎಷ್ಟು ಸುರಕ್ಷಿತ? ಹಕ್ಕಿಜ್ವರದ ಭೀತಿ ಮಧ್ಯೆಯೂ ಕೋಳಿ ಸೇವನೆಗೆ ಏನೆಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಕಟಿಸಿದೆ.
ಗೈಡ್ಲೈನ್ನಲ್ಲಿ ಏನಿದೆ?
ಕೋಳಿ ಸೇವನೆಗೆ ಮಾರ್ಗಸೂಚಿ:
1. 70 ಡಿಗ್ರಿ ಸೆಂಟಿಗ್ರೇಡ್ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಕೋಳಿ ಬೇಯಿಸಿ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಬಹುದು.
2. ಕೋಳಿ ಮಾಂಸವನ್ನ ಅಡುಗೆಗೆ ತಯಾರು ಮಾಡುವವರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು.
3. ಅಡುಗೆಗಾಗಿ ಕೋಳಿಮಾಂಸವನ್ನ ತಯಾರು ಮಾಡಿದ ಬಳಿಕ ನಂಜುನಾಶಕದಿಂದ ಕೈಗಳನ್ನ ಶುಚಿಗೊಳಿಸಿಕೊಳ್ಳಬೇಕು.
4. ಹಸಿ ಕೋಳಿಮಾಂಸ, ಅದರ ದ್ರವಗಳು ಅಥವಾ ಬೇಯಿಸಿದ ಮೊಟ್ಟೆಯನ್ನು, ಬೇಯಿಸದೇ ಉಪಯೋಗಿಸುವ ಆಹಾರ ಪದಾರ್ಥಗಳು ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು .
5. ಬೇಯಿಸದಿರುವ, ಅರೆಬೆಂದ ಮೊಟ್ಟೆಯನ್ನ ತಿನ್ನಬಾರದು.
6. ಅಧಿಕ ಉಷ್ಣಾಂಶದ ವಾತಾವರಣದಲ್ಲಿ ವೈರಾಣು ಹೆಚ್ಚಿನ ಕಾಲ ಬದುಕುಳಿಯುವುದಿಲ್ಲ.
ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ:
1. ಸಾರ್ವಜನಿಕರು ಅನಗತ್ಯವಾಗಿ ಕೋಳಿ ಫಾರಂಗೆ ಭೇಟಿ ನೀಡಬಾರದು.
2. ಕೋಳಿ ಫಾರಂನಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರು ತಮ್ಮ ಬಟ್ಟೆ, ಶೂ ಹಾಗೂ ಕೈ, ಕಾಲುಗಳಿಗೆ ನಂಜುನಾಶಕ ದ್ರಾವಣ ಸಿಂಪಡಿಸಬೇಕು.
3. ಕೋಳಿ ಸಾಕಾಣಿಕೆಗೆ ಬೇಕಾಗುವ ಸಲಕರಣೆಗಳನ್ನ ಬೇರೆ ಕೋಳಿ ಫಾರಂನಿಂದ ಪಡೆಯಬೇಕಾದರೆ ಸ್ಯಾನಿಟೈಸೆಷನ್ ಮಾಡಬೇಕು ಮತ್ತು ನಂಜುನಾಶಕವನ್ನ ಅಳವಡಿಸಬೇಕು.
4. ಕೋಳಿ ಪಂಜರಗಳನ್ನ ದಿನನಿತ್ಯ ಶುಚಿ ಮಾಡುವುದು. ಆಹಾರ ಮತ್ತು ನೀರನ್ನ ಪ್ರತಿದಿನ ಬದಲಾಯಿಸುವುದು.
5. ಕೋಳಿ ಫಾರಂನಲ್ಲಿ ಬೇರೆ ಹಕ್ಕಿಗಳು ಕೋಳಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು.