ತುಮಕೂರು: ಭಾರತ ಒಕ್ಕೂಟ ವ್ಯವಸ್ಥೆ ಅಸ್ವಿತ್ವಕ್ಕೆ ಬಂದು 77 ವರ್ಷ ತುಂಬಿರುವ ಸಂದರ್ಭದಲ್ಲಿ ಗಣರಾಜ್ಯೋತ್ಸವನ್ನು ದೇಶಾದ್ಯಂತ ಶಿಸ್ತು, ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯ, ಜವಾಬ್ದಾರಿ ಅರಿತು, ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಜಾತಿ, ಧರ್ಮ, ಭಾಷೆ, ಪಕ್ಷ ಮೀರಿ ಕೈಜೋಡಿಸಬೇಕು ಎಂದು ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್ ಮನವಿ ಮಾಡಿದರು.
ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ರಾಜ್ಯ ಸಂಘದಿಂದ ಸೋಮವಾರ ನಗರದ ಕೆ.ಆರ್.ಬಡಾವಣೆಯ ಸಂಘದ ಕಚೇರಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹಬ್ಬ, ನಾಡಹಬ್ಬಗಳು ಕೇವಲ ಸರ್ಕಾರ, ಸರ್ಕಾರಿ ಕಚೇರಿಗಳಲ್ಲಿ ಆಚರಣೆಗೆ ಸೀಮಿತವಾಗಬಾರದು, ಪ್ರತಿಯೊಬ್ಬ ಭಾರತೀಯರೂ ಮನೆ ಹಬ್ಬದಂತೆ ಆಚರಣೆ ಮಾಡಿ ದೇಶಪ್ರೇಮ ಮೆರೆಯಬೇಕು. ಸಂಘಸಂಸ್ಥೆಗಳು ಇಂತಹ ಹಬ್ಬಗಳನ್ನು ತಪ್ಪದೇ ಆಚರಣೆ ಮಾಡಬೇಕು ಎಂದು ಹೇಳಿದರು.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕೂಡಾ ವಿವಿಧ ಪ್ರಾಂತಗಳು ಒಕ್ಕೂಟ ವ್ಯವಸ್ಥೆಗೆ ಒಳಪಡಲು ವಿರೋಧ ವ್ಯಕ್ತಪಡಿಸಿದಾಗ ಸರದಾರ್ ವಲ್ಲಭಭಾಯಿ ಪಟೇಲರಂತಹ ಅನೇಕ ನಾಯಕರು ದೇಶದ ಎಲ್ಲಾ ಭಾಗಗಳನ್ನು ಒಂದೇ ಒಕ್ಕೂಟದ ವ್ಯವಸ್ಥೆ ಅಡಿಗೆ ತರುವಲ್ಲಿ ಶ್ರಮಿಸಿ, ಏಕಭಾರತ ನಿರ್ಮಾಣಕ್ಕೆ ನಾಂದಿಯಾದರು. ಇಂದು ಭಾರತವು ವಿಶ್ವಮಾನ್ಯ ರಾಷ್ಟçವಾಗಿ ಸರ್ವರೀತಿಯಲ್ಲೂ ಅಭಿವೃದ್ಧಿಯಾಗುತ್ತಾ ಮುನ್ನಡೆಯುತ್ತಿದೆ ಎಂದು ಎಸ್.ಪಿ.ಚಿದಾನಂದ್ ತಿಳಿಸಿ, ಗಣರಾಜ್ಯೋತ್ಸವ ಶುಭಾಶಯ ಕೋರಿದರು.
ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ, ಶಿವಣ್ಣ, ಜಿ.ರಮ್ಯಾಶ್ರೀ, ನಾಗರತ್ನಮ್ಮ, ಹೆಚ್.ರಾಜಣ್ಣ, ಆದಿಲ್ ಬಾಷಾ, ವಿಜಯ್ಕುಮಾರ್ ಬುಳ್ಳಾ, ಮುಖಂಡರಾದ ಸಿದ್ದು ಗೋಬಿ, ಕೃಷ್ಣ, ಗಂಗಾಧರ್, ಮಂಜುಳಾ, ನಟರಾಜು, ಕೆಂಪಣ್ಣ, ಶಾಂತಮ್ಮ, ತನುಜಮ್ಮ, ಚಿಕ್ಕರಂಗಯ್ಯ, ವೇಣುಗೋಪಾಲ್ ಮೊದಲಾದವರು ಹಾಜರಿದ್ದರು. ಕನ್ನಡಪರ ಮತ್ತು ಇತರೆ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಪಿ.ಎನ್.ರಾಮಯ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗಣರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
– ಕೆ. ಬಿ. ಚಂದ್ರಚೂಡ
