ಶ್ಲೋಕ – 03
ಅಶ್ರದ್ದಧಾನಾಃ ಪುರುಷಾ ಧರ್ಮಸ್ಯಾಸ್ಯ ಪರಂತಪ ।
ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ ॥೩॥
ಉಚ್ಚಾರಣೆ:- ಅಶ್ರದ್ದಧಾನಾಃ ಪುರುಷಾಃ ಧರ್ಮಸ್ಯ ಅಸ್ಯ ಪರಂತಪ ।
ಅಪ್ರಾಪ್ಯ ಮಾಮ್ ನಿವರ್ತಂತೇ ಮೃತ್ಯು ಸಂಸಾರ ವರ್ತ್ಮನಿ-
ಅರಿಗಳ ಉರಿಯೆ, ಈ ನಡೆಯ ಬಗೆಗೆ ನಂಬಿಕೆಯಿಡದ ಮಂದಿ ನನ್ನನ್ನು ಪಡೆಯದೆ ಸಾವಿನ ಸುಳಿಯಾದ ಬಾಳ ದಾರಿಯಲ್ಲಿ ಜಾರಿಬೀಳುತ್ತಾರೆ.
ಹಿಂದೆ ಅಸೂಯೆ ಬಗ್ಗೆ ಹೇಳಿದ್ದ ಕೃಷ್ಣ ಇಲ್ಲಿ ಇನ್ನೊಂದು ಅತೀ ಮುಖ್ಯವಾದ ಗುಣದ ಬಗ್ಗೆ ಹೇಳುತ್ತಾನೆ-
ಅದೇ ‘ಶ್ರದ್ಧೆ’. ಯಾರಿಗೆ ಶ್ರದ್ಧೆ ಇಲ್ಲ ಅವರಿಗೆ ಏನನ್ನು ಹೇಳಿಯೂ ಉಪಯೋಗವಿಲ್ಲ. ನಮಗೆ ಯಾವುದರ ಮೇಲೆ ಶ್ರದ್ಧೆ ಇಲ್ಲವೋ ಅದನ್ನು ನಮ್ಮ ಮನಸ್ಸು ಸ್ವೀಕರಿಸುವುದೇ ಇಲ್ಲ. ಒಂದು ವಿಷಯವನ್ನು ನಾವು ಗ್ರಹಣ ಮಾಡಬೇಕಾದರೆ ನಮಗೆ ಆ ವಿಷಯದಲ್ಲಿ ಶ್ರದ್ಧೆ ಇರಬೇಕು. “ನನಗೆ ಗೊತ್ತಿಲ್ಲದ ವಿಷಯಗಳು ಇರಲು ಸಾಧ್ಯ, ಏಕೆಂದರೆ ನನಗೆ ಗೊತ್ತಿಲ್ಲದೇ ಇರುವ ಬಹಳ ಸಂಗತಿಗಳಿವೆ” –ಎಂದು ತಿಳಿಯುವುದು ಶ್ರದ್ಧೆಯ ಮೊದಲ ಮೆಟ್ಟಿಲು. (I must know that I do not know). ನಮ್ಮ ಅಜ್ಞಾನದ ಅರಿವು ನಮಗಿರಬೇಕು. ಆಗ ಗೊತ್ತಿಲ್ಲದ್ದನ್ನು ಗೊತ್ತು ಮಾಡಿಕೊಳ್ಳುವ ಶ್ರದ್ಧೆ ಬರುತ್ತದೆ. ಮೊದಲು ಗೊತ್ತಿಲ್ಲ ಅನ್ನುವುದರ ಬಗ್ಗೆ ನಮಗೆ ಗೊತ್ತಿರಬೇಕು; ಆಮೇಲೆ ನಮಗೆ ಗೊತ್ತಿಲ್ಲದೆ ಇರುವ ಇರುವ ವಿಷಯ ಸತ್ಯವಾಗಿರುವ ಸಾಧ್ಯತೆ ಇದೆ ಎನ್ನುವ ಸಾಧ್ಯತೆಯ ಅರಿವು ಬೇಕು; ಅದನ್ನು ತಿಳಿಯುವ ಶ್ರದ್ಧೆ ಬೇಕು. ಹೀಗೆ ತಿಳಿಯುತ್ತಾ ಗೊತ್ತಿಲ್ಲದ ವಸ್ತು ಇದೆ ಎನ್ನುವ ಸತ್ಯ ತಿಳಿಯುತ್ತದೆ.
ಜ್ಞಾನದ ದಾರಿಯಲ್ಲಿ ಸಾಗುವ ಸಾಧಕನಿಗೆ ಮೂಲಭೂತವಾಗಿ ನಂಬಿಕೆ ಬೇಕು. ನಂಬದವನ ಮುಂದೆ ಏನು ಹೇಳಿಯೂ ಪ್ರಯೋಜನವಿಲ್ಲ. ಇದನ್ನೇ ಇಲ್ಲಿ ಕೃಷ್ಣ ಹೇಳುತ್ತಾನೆ “ಯಾರಿಗೆ ಶ್ರದ್ಧೆ ಇಲ್ಲವೋ ಅಂತವರ ಪಾಲಿಗೆ ಸತ್ಯ ಇಲ್ಲ” ಎಂದು. ಜಗತ್ತಿನ ಧಾರಕನಾದ ಭಗವಂತನ ಬಗೆಗೆ ನಂಬಿಕೆ ಇಲ್ಲದವರು ಭಗವಂತನನ್ನು ಸೇರುವುದಿಲ್ಲ. “ಅಂತವರು ಆತ್ಮ ನಾಶವಾದ ತಮಸ್ಸನ್ನು ಸೇರುತ್ತಾರೆ ಅಥವಾ ಸಂಸಾರದ ಸುಳಿಯಲ್ಲಿ ಸುತ್ತುತ್ತಿರುತ್ತಾರೆ” ಎನ್ನುತ್ತಾನೆ ಕೃಷ್ಣ.
ಈ ಶ್ಲೋಕದಲ್ಲಿ ಪರಂತಪ ಎನ್ನುವ ವಿಶೇಷಣವನ್ನು ಬಳಸಲಾಗಿದೆ. ಇದರ ಮೇಲ್ನೋಟದ ಅರ್ಥ ಶತ್ರುಗಳನ್ನು ಸುಡುವ ಶೂರ ಎಂದು. ನಮ್ಮ ಜೀವನ ಯುದ್ಧದಲ್ಲಿ ನಮ್ಮ ಶತ್ರುಗಳೆಂದರೆ ನಮ್ಮೊಳಗೆ ಇರುವ ಅಜ್ಞಾನ, ಮೋಹ, ಕಾಮ, ಕ್ರೋಧ, ಇತ್ಯಾದಿಗಳು. ಪ್ರತಿಯೊಬ್ಬ ಸಾಧಕ ಕೂಡಾ ಪರತತ್ವದಲ್ಲಿ ಶ್ರದ್ಧೆಯನ್ನಿಟ್ಟು ಇಂತಹ ಶತ್ರುಗಳನ್ನು ಸುಡುವ ಬೆಂಕಿಯಾಗಬೇಕು, ಸುಟ್ಟು ಬೆಳಗುವ ಪರಂತಪನಾಗಬೇಕು.
ಮುಂದಿನ ಶ್ಲೋಕಗಳಲ್ಲಿ ಕೃಷ್ಣ ತಿಳಿಯಬೇಕಾದ ಜ್ಞಾನದ ಬಗ್ಗೆ ಉಪದೇಶ ಮಾಡುತ್ತಾನೆ.
