ಮುಂಬೈ : ಮಹಾರಾಷ್ಟ್ರದ ಬಾರಾಮತಿಯಲ್ಲಿ ಬುಧವಾರ ಬೆಳಿಗ್ಗೆ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಮಹಾರಾಷ್ಟ್ರ DCM ಅಜಿತ್ ಪವಾರ್ ಇದ್ದರು ಎಂದು ವರದಿಯಾಗಿದೆ.
ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ವಿಮಾನದಲ್ಲಿರುವ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದ ವಿಮಾನ ಅಪಘಾತವಾಗಿದ್ದು, ವಿಮಾನದಲ್ಲಿ ಇರುವ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಆರಂಭಿಕ ಮಾಹಿತಿಯು ಸಿಕ್ಕಿದೆ. ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಚುನಾವಣೆ ಪ್ರಚಾರಕ್ಕೆ ಎಂದು ತೆರಳುವಾಗ ವಿಮಾನ ಅಪಘಾತವಾಗಿದೆ ಎನ್ನಲಾಗಿದೆ.
- ಮಹಾರಾಷ್ಟ್ರದ ಬಾರಾಮತಿಯಲ್ಲಿ ಅಜಿತ್ ಪವಾರ್ ಅವರು ಪ್ರಯಾಣ ಮಾಡುತ್ತಿದ್ದ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಪತನವಾಗಿದೆ. ಇದು ಖಾಸಗಿ ವಿಮಾನವಾಗಿದ್ದು, ತಾಂತ್ರಿಕ ದೋಷದಿಂದ ಘಟನೆ ಸಂಭವಿಸಿದೆಯಾ? ಅಥವಾ ಬೇರೆ ಕಾರಣ ಇದೆಯಾ? ಎಂಬ ಕುರಿತು ಚರ್ಚೆ ಶುರುವಾಗಿದೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದ ವಿಮಾನದ ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ, ಏರ್ಪೋರ್ಟ್ ಬಳಿ ವಿಮಾನದ ಅವಶೇಷಗಳು ಚಲ್ಲಾಪಿಲ್ಲಿಯಾಗಿ ಬಿದ್ದು ಎದೆ ನಡುಗಿಸುವಂತೆ ಇತ್ತು ದೃಶ್ಯ. ಹಾಗೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗಿಸಿದ್ದು, ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪರದಾಡಿದ್ದಾರೆ. ಅಲ್ಲದೆ ವಿಮಾನ ಅಪಘಾತದ ವೇಳೆ ದೊಡ್ಡ ಮಟ್ಟದಲ್ಲಿ ಸದ್ದು ಕೂಡ ಕೇಳಿಬಂದಿದೆ ಎನ್ನಲಾಗಿದ್ದು, ಪವಾರ್ ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು.
66 ವರ್ಷದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಜೊತೆಗೆ ಅಂಗರಕ್ಷಕರು ಕೂಡ ಇದ್ದರು ಎನ್ನಲಾಗಿದ್ದು, ಪೈಲಟ್ ಸೇರಿದಂತೆ ಒಟ್ಟಾರೆ 5 ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ದುರಂತ ಸಂಭವಿಸಿದ ವಿಮಾನ ನಿಲ್ದಾಣದಲ್ಲಿ ಇದೀಗ ವಿಮಾನಗಳ ಹಾರಾಟ ಬಂದ್ ಮಾಡಿ, ಬೆಂಕಿ ನಂದಿಸುವ ಕೆಲಸ ನಡೆಸಲಾಗಿದೆ. ವಿಮಾನದ ಅವಶೇಷ ತೆರವು ಕಾರ್ಯ ಕೂಡ ಆರಂಭವಾಗಿದ್ದು ಸ್ಥಳದಲ್ಲಿ ತನಿಖಾಧಿಕಾರಿಗಳು ಹಾಜರಾಗಿದ್ದಾರೆ. ದುರಂತದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಇದೀಗ ಕಟ್ಟೆಚ್ಚರ ವಹಿಸಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದರು
ಮಹಾರಾಷ್ಟ್ರ ರಾಜ್ಯದಲ್ಲಿ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಚುನಾವಣೆಗಾಗಿ ಪ್ರಚಾರ ಮಾಡಲು ಎನ್ಸಿಪಿ ನಾಯಕ & ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ. ಅಜಿತ್ ಪವಾರ್ ಮಂಗಳವಾರ ಮುಂಬೈನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಇಂದು ಮುಂಬೈ ನಗರದಿಂದ ಪುಣೆ ಕಡೆಗೆ ಅವರು ಪ್ರಯಾಣ ಬೆಳೆಸಿದ್ದರು.
ಚುನಾವಣೆ ಸಭೆ ನಡೆಸಲು ತೆರಳಿದ್ದರು
ಪುಣೆಯಲ್ಲಿ ನಡೆಯಲಿರುವ ಚುನಾವಣೆ ಕುರಿತು ಸಭೆಗಳನ್ನ ನಡೆಸಲು ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ. ಎಲ್ಲವೂ ಸರಿಯಾಗಿದ್ದಾಗ, ಲ್ಯಾಂಡಿಂಗ್ ಸಮಯದಲ್ಲಿ ದಿಢೀರ್ ಏನೋ ವ್ಯಾತ್ಯಾಸ ಕಂಡುಬಂದಿದ್ದು, ವಿಮಾನ ಸ್ಫೋಟವಾಗಿದೆ ಎಂಬ ಮಾಹಿತಿ ಪ್ರಾಥಮಿಕ ಹಂತದಲ್ಲಿ ತಿಳಿದು ಬಂದಿದೆ. ಆದರೆ ಈ ಬಗ್ಗೆ ಸಂಪೂರ್ಣ ಮಾಹಿತಿಗೆ ತನಿಖೆ ನಡೆಯಬೇಕಿದ್ದು, ತನಿಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಂತ್ರಿ ಅವರ ಸಾವಿನ ಸುದ್ದಿ ಇದೀಗ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡುತ್ತಿದೆ.

[…] […]