ಹಾಸನ: ಪತಿ–ಪತ್ನಿ ನಡುವಿನ ಕಲಹದ ಹಿನ್ನೆಲೆ ಒಂದೇ ಕುಟುಂಬದಲ್ಲಿ ಎರಡು ಆಘಾತಕಾರಿ ಘಟನೆಗಳು ನಡೆದಿರುವ ಪ್ರಕರಣ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯ ಅದ್ದಿಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮೂರು ದಿನಗಳ ಹಿಂದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪತಿ ಚೇತನ್ (28) ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೆ, ಇದೇ ಸಂದರ್ಭದಲ್ಲಿ ಪತ್ನಿ ರಂಜಿತಾ (25) ಪತಿ ಮನೆಯಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಐದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದ ರಂಜಿತಾ–ಚೇತನ್ ದಂಪತಿಗಳ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ನಿರಂತರ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ. ಈ ಮಾನಸಿಕ ಒತ್ತಡದಿಂದ ಬೇಸತ್ತು ಎರಡು ದಿನಗಳ ಹಿಂದೆ ಚೇತನ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿನ್ನೆ ರಂಜಿತಾ ತಮ್ಮ ಮಗನೊಂದಿಗೆ ಆಸ್ಪತ್ರೆಗೆ ತೆರಳಿ ಪತಿ ಚೇತನ್ ಅವರನ್ನು ಭೇಟಿಯಾಗಿ ಮನೆಗೆ ಹಿಂತಿರುಗಿದ್ದರು. ಆದರೆ ಅದೇ ರಾತ್ರಿ ಪತಿ ಮನೆಯಲ್ಲೇ ರಂಜಿತಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ರಂಜಿತಾ ಅವರ ಸಾವು ವರದಕ್ಷಿಣೆ ಕಿರುಕುಳದಿಂದ ಸಂಭವಿಸಿದೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದು, ಈ ಸಂಬಂಧ ಪತಿ ಚೇತನ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.