ಭುವನೇಶ್ವರ, ಜನವರಿ 28: ಒಡಿಶಾವನ್ನು ಜಾಗತಿಕ ಹಸಿರು ಮೆಥನಾಲ್ ಉತ್ಪಾದನಾ ನಕ್ಷೆಯಲ್ಲಿ ಪ್ರಮುಖ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಭಾರತದ ಪ್ರಮುಖ ಶುದ್ಧ ಇಂಧನ ಸಂಸ್ಥೆಯಾದ ಆಕ್ಮೆ (ACME) ಗ್ರೂಪ್ ಹಾಗೂ ಒಡಿಶಾ ಕೈಗಾರಿಕಾ ಪ್ರಚಾರ ಮತ್ತು ಹೂಡಿಕೆ ನಿಗಮ ಲಿಮಿಟೆಡ್ (IPICOL) ಕೈಜೋಡಿಸಿವೆ. ಈ ಸಹಕಾರದಡಿ, ಒಡಿಶಾದಲ್ಲಿ 200 ಕೆಟಿಪಿಎ ಸಾಮರ್ಥ್ಯದ ಹಸಿರು ಮೆಥನಾಲ್ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಯನ್ನು ಆಕ್ಮೆ ಗ್ರೂಪ್ ಘೋಷಿಸಿದೆ.
ಒಡಿಶಾ ಸರ್ಕಾರವು ತನ್ನ ಸ್ಪರ್ಧಾತ್ಮಕ ಕೈಗಾರಿಕಾ ಪ್ರಯೋಜನಗಳನ್ನು ಬಳಸಿಕೊಂಡು ರಾಜ್ಯದ ವಿವಿಧ ಭಾಗಗಳಲ್ಲಿ ಹೊಸ ಕೈಗಾರಿಕೆಗಳನ್ನು ಆಕರ್ಷಿಸುವ ದೃಢ ನಿಲುವು ತಳೆದಿರುವ ಹಿನ್ನೆಲೆ, ಆಕ್ಮೆ ಗ್ರೂಪ್ ರಾಜ್ಯದಲ್ಲಿ ದೃಢವಾದ ಉತ್ಪಾದನಾ ನೆಲೆಯನ್ನು ಸ್ಥಾಪಿಸಲು IPICOL ಜತೆ ಸಹಕರಿಸಿದೆ. ಈ ಹಸಿರು ಮೆಥನಾಲ್ ಸೌಲಭ್ಯವು ಆಕ್ಮೆ ಗ್ರೂಪ್ನ ಹಸಿರು ಹೈಡ್ರೋಜನ್ ವ್ಯವಹಾರದ ಭಾಗವಾಗಿದ್ದು, ಇದನ್ನು ACME Renewable Energy Private Limited ಎಂಬ ವಿಶೇಷ ಉದ್ದೇಶ ವಾಹಕ ಸಂಸ್ಥೆಯಡಿ ಅನುಷ್ಠಾನಗೊಳಿಸಲಾಗುತ್ತದೆ.
ಈ ಯೋಜನೆಯು ಒಡಿಶಾದ ಕೇಂದ್ರಪಾಡಾ ಜಿಲ್ಲೆಯಲ್ಲಿ ಸ್ಥಾಪನೆಯಾಗುವ ನಿರೀಕ್ಷೆಯಿದ್ದು, 1,100ಕ್ಕೂ ಹೆಚ್ಚು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಜತೆಗೆ, ಹಸಿರು ಹೈಡ್ರೋಜನ್ ಮತ್ತು ಅದರ ಉತ್ಪನ್ನಗಳಿಗೆ ಜಾಗತಿಕ ಕೇಂದ್ರವಾಗುವ ಭಾರತದ ಮಹತ್ವಾಕಾಂಕ್ಷೆಗೆ ಈ ಯೋಜನೆ ಬಲ ತುಂಬಲಿದೆ. ಯೋಜನೆಯ ಆರಂಭಿಕ ಅನುಷ್ಠಾನಕ್ಕಾಗಿ ACME ಹಾಗೂ IPICOL ಸಂಯುಕ್ತವಾಗಿ ನೋಡಲ್ ಅಧಿಕಾರಿಯನ್ನು ಗುರುತಿಸುವುದಾಗಿ ತಿಳಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಆಕ್ಮೆ ಗ್ರೂಪ್ನ ಹಸಿರು ಹೈಡ್ರೋಜನ್ ಮತ್ತು ಅಮೋನಿಯಾ ವ್ಯವಹಾರ ಘಟಕದ ಮುಖ್ಯ ಕಾರ್ಯಾಚರಣಾ ಅಧಿಕಾರಿ ಶ್ರೀ ಅನಿಲ್ ತಪರಿಯಾ, “ಬಲಿಷ್ಠ ಹಸಿರು ಇಂಧನ ಪರಿಸರ ವ್ಯವಸ್ಥೆ, ಆಳವಾದ ಕೈಗಾರಿಕಾ ನೆಲೆ ಮತ್ತು ಸಮೃದ್ಧ ಬಂದರು ಮೂಲಸೌಕರ್ಯ ಹೊಂದಿರುವ ಒಡಿಶಾ, ಹಸಿರು ಮೆಥನಾಲ್ ಸೇರಿದಂತೆ ಹಸಿರು ಅಣುಗಳ ಉತ್ಪಾದನೆಗೆ ವೇಗವಾಗಿ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಪಾರದೀಪ್ ಹಾಗೂ ಗೋಪಾಲಪುರದ ಸುತ್ತಲೂ ದೇಶೀಯ ಹಾಗೂ ರಫ್ತು ಉದ್ದೇಶಗಳಿಗಾಗಿ ಅನೇಕ ಹಸಿರು ಹೈಡ್ರೋಜನ್ ಮತ್ತು ಅಮೋನಿಯಾ ಯೋಜನೆಗಳನ್ನು ನಾವು ಅಭಿವೃದ್ಧಿಪಡಿಸುತ್ತಿದ್ದೇವೆ” ಎಂದು ಹೇಳಿದರು.
ಜೈವಿಕ ಫೀಡ್ಸ್ಟಾಕ್ಗಳ ಸಮೃದ್ಧ ಲಭ್ಯತೆ, ಕೈಗಾರಿಕಾ ನೀತಿಗಳ ಬೆಂಬಲ ಮತ್ತು ಕಡಿಮೆ ವೆಚ್ಚದ ಹಸಿರು ವಿದ್ಯುತ್ ಪೂರೈಕೆಯು ಒಡಿಶಾದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ವೆಚ್ಚದಲ್ಲಿ ಹಸಿರು ಮೆಥನಾಲ್ ಉತ್ಪಾದನೆಗೆ ಅನುಕೂಲಕರ ಪರಿಸರವನ್ನು ರೂಪಿಸಿದೆ ಎಂದು ಅವರು ವಿವರಿಸಿದರು.
ಇದೇ ವೇಳೆ, ಆಕ್ಮೆ ಗ್ರೂಪ್ನ ಹಸಿರು ಹೈಡ್ರೋಜನ್ ಮತ್ತು ಅಮೋನಿಯಾ ವ್ಯವಹಾರಕ್ಕೆ ಒಡಿಶಾ ಪ್ರಮುಖ ಹೂಡಿಕೆ ತಾಣವಾಗಿ ಹೊರಹೊಮ್ಮುತ್ತಿದೆ. ಜಪಾನ್ನ IHI ಕಾರ್ಪೊರೇಷನ್ ಜತೆಗಿನ ಜಂಟಿ ಉದ್ಯಮದ ಮೂಲಕ ಗೋಪಾಲಪುರದಲ್ಲಿ ಭಾರತದ ಅತ್ಯಂತ ಪ್ರತಿಷ್ಠಿತ ಹಸಿರು ಅಮೋನಿಯಾ ಸೌಲಭ್ಯಗಳಲ್ಲಿ ಒಂದನ್ನು ಸ್ಥಾಪಿಸಲು ಯೋಜಿಸಲಾಗಿದೆ. ಇದಲ್ಲದೆ, SECI ಯಿಂದ SIGHT ಸ್ಕೀಮ್ ಮೋಡ್–2A, ಟ್ರಾಂಚೆ–I ಅಡಿಯಲ್ಲಿ ಆರು ಪ್ರಶಸ್ತಿ ಪತ್ರಗಳನ್ನು ಪಡೆದಿರುವ ಆಕ್ಮೆ ಗ್ರೂಪ್, ಪಾರದೀಪ್ನಲ್ಲಿ ದಿನಕ್ಕೆ 2,200 ಮೆಟ್ರಿಕ್ ಟನ್ ಸಾಮರ್ಥ್ಯದ ಹಸಿರು ಅಮೋನಿಯಾ ಘಟಕ ಸ್ಥಾಪಿಸುತ್ತಿದೆ. ಈ ಒಪ್ಪಂದದಡಿ, ಮುಂದಿನ 10 ವರ್ಷಗಳ ಅವಧಿಗೆ ವರ್ಷಕ್ಕೆ 3.7 ಲಕ್ಷ ಮೆಟ್ರಿಕ್ ಟನ್ ಹಸಿರು ಅಮೋನಿಯಾವನ್ನು ಭಾರತದ ಪ್ರಮುಖ ರಸಗೊಬ್ಬರ ಹಾಗೂ ರಾಸಾಯನಿಕ ಕಂಪನಿಗಳಿಗೆ ಪೂರೈಸಲಿದೆ.
ವಿಶ್ಲೇಷಕರ ಪ್ರಕಾರ, 2030ರ ಹೊತ್ತಿಗೆ ಜಾಗತಿಕ ಹಸಿರು ಮೆಥನಾಲ್ ಮಾರುಕಟ್ಟೆ ಸಾಗಣೆ ಕ್ಷೇತ್ರದ ಡಿಕಾರ್ಬನೀಕರಣದಿಂದಾಗಿ ವರ್ಷಕ್ಕೆ 5–10 ಮಿಲಿಯನ್ ಟನ್ ಬೇಡಿಕೆಯನ್ನು ಕಾಣುವ ಸಾಧ್ಯತೆಯಿದೆ. ಈ ಹಿನ್ನೆಲೆ, ನವೀಕರಿಸಬಹುದಾದ ಇಂಧನ ಸಾಮರ್ಥ್ಯ, ಬಂದರು ಪ್ರವೇಶ ಮತ್ತು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ನ ನೀತಿ ಬೆಂಬಲದೊಂದಿಗೆ ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ರಫ್ತುದಾರನಾಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಿದೆ.
