ಕೊರಟಗೆರೆ: ತಾಲ್ಲೂಕಿನ ಹೋಳವನಹಳ್ಳಿ ಹೋಬಳಿಯ ಹುರುಳಗೆರೆ ಗ್ರಾಮದಲ್ಲಿ ದಿನಾಂಕ 28-01-2026 ರಂದು ಹಗಲು ಹೊತ್ತಿನಲ್ಲೇ ನಡೆದ ಮನೆ ದರೋಡೆ ಪ್ರಕರಣ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಕಳವಿನಲ್ಲಿ ಸುಮಾರು ₹10 ಲಕ್ಷಕ್ಕೂ ಅಧಿಕ ಮೌಲ್ಯದ 120 ಗ್ರಾಂ ಚಿನ್ನಾಭರಣಗಳು ಹಾಗೂ ₹50,000 ನಗದು ಕಳವು ಆಗಿರುವುದು ವರದಿಯಾಗಿದೆ.
ಗ್ರಾಮದ ನಿವಾಸಿ ಅಂಜಿನಪ್ಪ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಸುಮಾರು 30 ವರ್ಷಗಳಿಂದ ಇದೇ ಮನೆಯಲ್ಲಿ ವಾಸವಾಗಿರುವ ಅಂಜಿನಪ್ಪ ಅವರು ಮಾತನಾಡಿ, “ನಾವು ರೈತ ಕುಟುಂಬವಾಗಿದ್ದು, ಕೃಷಿ ಕೆಲಸದ ನಿಮಿತ್ತ ಮಧ್ಯಾಹ್ನ ಹೊಲಕ್ಕೆ ತೆರಳಿದ್ದೆವು. ಸಂಜೆ ಸುಮಾರು 5.30ರ ವೇಳೆಗೆ ಕಳ್ಳರು ಮನೆಯ ಕಿಟಕಿಯನ್ನು ಒಡೆದು ಒಳನುಗ್ಗಿ, ನನ್ನ ಸೊಸೆಯ ಚಿನ್ನದ ನೆಕ್ಲೆಸ್, ವಾಲೆ, ಜುಮ್ಕಿ, ಲಾಂಗ್ ಸರ ಸೇರಿದಂತೆ ₹50,000 ನಗದನ್ನು ಕಳವು ಮಾಡಿದ್ದಾರೆ” ಎಂದು ಆರೋಪಿಸಿದರು.

ಗ್ರಾಮದಲ್ಲಿ ಪೊಲೀಸ್ ಬಿಟ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಇಂತಹ ಕಳ್ಳತನದ ಘಟನೆಗಳು ಹೆಚ್ಚಾಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಹಾಗೂ ಕಳವುಗೊಂಡ ಆಭರಣ ಮತ್ತು ನಗದನ್ನು ಶೀಘ್ರ ಪತ್ತೆಹಚ್ಚಬೇಕು ಎಂದು ಅವರು ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ಪೊಲೀಸ್ ಉಪ ವರಿಷ್ಠಾಧಿಕಾರಿ ಮಂಜುನಾಥ್, ಕೋಳಾಲ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಭಿಷೇಕ್, ಕಾನ್ಸ್ಟೇಬಲ್ ಮಧು ಹಾಗೂ ಎಸ್ಪಿ ಕಾನ್ಸ್ಟೇಬಲ್ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಗೂ ಕಳವುಗೊಂಡ ಮನೆಯ ಯಜಮಾನರು ಉಪಸ್ಥಿತರಿದ್ದರು.
ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ವರದಿ: ನರಸಿಂಹಯ್ಯ ಹೊಸಕೋಟೆ
