ಬೆಂಗಳೂರು: ಸಾರ್ವಜನಿಕರ ಸುರಕ್ಷತೆಗಾಗಿ ದಿನದ 24 ಗಂಟೆಯೂ ಕಠಿಣ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸುವ ರಾಜ್ಯ ಪೊಲೀಸ್ ಸಿಬ್ಬಂದಿಗೆ ಸಂತಸದ ಕ್ಷಣಗಳನ್ನು ಕುಟುಂಬದೊಂದಿಗೆ ಕಳೆಯಲು ಅವಕಾಶ ಕಲ್ಪಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಪೊಲೀಸ್ ಇಲಾಖೆ ಕೈಗೊಂಡಿದೆ.
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಅವರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ದಿನ ಸಾಂದರ್ಭಿಕ (ಕಡ್ಡಾಯ) ರಜೆ ನೀಡುವಂತೆ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಹೊರಡಿಸಿರುವ ಆದೇಶದಲ್ಲಿ, ವಿಶೇಷ ದಿನಗಳಲ್ಲಿ ರಜೆ ಪಡೆಯುವುದರಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾವನಾತ್ಮಕವಾಗಿ ಪುನಶ್ಚೇತನಗೊಳ್ಳುತ್ತಾರೆ, ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಲು ಸಹಾಯವಾಗುತ್ತದೆ ಹಾಗೂ ಕರ್ತವ್ಯ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಸಾಧಿಸಲು ಅನುಕೂಲವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದರಿಂದ ಒತ್ತಡ ಕಡಿಮೆಯಾಗಿದ್ದು, ಮನೋಬಲ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವನ್ನು ಇಲಾಖೆ ವ್ಯಕ್ತಪಡಿಸಿದೆ.
ರಾಜ್ಯ ಒಳಾಡಳಿತ ಇಲಾಖೆ ಪೊಲೀಸ್ ಸಿಬ್ಬಂದಿಗೆ ಕಡ್ಡಾಯ ಸಾಂದರ್ಭಿಕ ರಜೆ ನೀಡುವ ಕುರಿತು ಪೊಲೀಸ್ ಮಹಾನಿರ್ದೇಶಕರಿಗೆ ಅಧಿಕೃತ ಪತ್ರ ಬರೆದಿತ್ತು. ಈ ಶಿಫಾರಸನ್ನು ಪರಿಶೀಲಿಸಿದ ಬಳಿಕ ಡಿಜಿ ಡಾ. ಎಂ.ಎ. ಸಲೀಂ ಅವರು ಪೊಲೀಸ್ ಸಿಬ್ಬಂದಿಗೆ ಬರ್ತ್ಡೇ ಹಾಗೂ ವೆಡ್ಡಿಂಗ್ ಆನಿವರ್ಸರಿ ರಜೆ ನೀಡುವಂತೆ ಅಂತಿಮ ಆದೇಶ ಹೊರಡಿಸಿದ್ದಾರೆ.
ಈ ನಿರ್ಧಾರವನ್ನು ಪೊಲೀಸ್ ವಲಯದಲ್ಲಿ ಸ್ವಾಗತಿಸಲಾಗಿದ್ದು, ಸಿಬ್ಬಂದಿಗಳ ಮನೋಸ್ಥೈರ್ಯ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಇದು ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.