ತುಮಕೂರು: ಚಲನೆಯೇ ಜೀವನ-ಜಡತೆಯೇ ಸಾವು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನುಷ್ಯ ಯಾವಾಗಲೂ ಕ್ರಿಯಾಶೀಲವಾಗಿರಬೇಕು ಎಂದು ನೌಕರರಿಗೆ ಕಿವಿಮಾತು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತುಮಕೂರು ಜಿಲ್ಲಾ ಘಟಕದ ವತಿಯಿಂದ ಡಾ: ಜಿ. ಪರಮೇಶ್ವರ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ಆಯೋಜಿಸಿದ್ದ “2025-26ನೇ ಸಾಲಿನ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ” ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿ ಕ್ರಿಯಾಶೀಲವಾಗಿದ್ದಲ್ಲಿ ಮಾತ್ರ ಬದುಕಿರುತ್ತಾನೆ ಎಂದ ಅವರು, ಸರ್ಕಾರಿ ನೌಕರರು ದೈಹಿಕವಾಗಿ ಹೆಚ್ಚೆಂದರೆ 10 ಗಂಟೆ ಕೆಲಸ ನಿರ್ವಹಿಸಬಹುದು. ಮಾನಸಿಕವಾಗಿ 4 ಗಂಟೆ ಕೆಲಸ ನಿರ್ವಹಿಸಬಹುದು. ಆದರೂ ಮನೆಗೆ ತೆರಳಿದ ನಂತರ ಇಡೀ ದಿನ ಆದ ಘಟನೆಗಳು ಹಾಗೂ ನಾಳೆ ಆಗಬೇಕಿರುವ ಕೆಲಸಗಳ ಬಗ್ಗೆ ಯೋಚಿಸುತ್ತೇವೆ. ದೈಹಿಕ ಮತ್ತು ಮಾನಸಿಕ ದೃಢತೆ ನೌಕರರಿಗೆ ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೌಕರರು ಸದಾ ಕ್ರಿಯಾಶೀಲರಾಗಿರಬೇಕು. ಒಂದಿಲ್ಲೊಂದು ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ನೌಕರರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಜಿಲ್ಲೆಯ ಎಲ್ಲಾ ಹಂತದ ಅಧಿಕಾರಿಗಳು/ ನೌಕರರ ಸಹಕಾರ ಮತ್ತು ಕ್ರಿಯಾಶೀಲತೆಯೇ ಮುಖ್ಯವಾಗಿತ್ತು ಎಂದ ಅವರು 2 ಬಾರಿ ಮುಖ್ಯಮಂತ್ರಿಯವರ ಕಾರ್ಯಕ್ರಮ, 2 ವರ್ಷ ತುಮಕೂರು ದಸರಾ ಉತ್ಸವ, ಕರ್ನಾಟಕ ರಾಜ್ಯ ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ರಾಜ್ಯ ಮಟ್ಟದ ಹಲವಾರು ಕಾರ್ಯಕ್ರಮಗಳನ್ನು ತುಮಕೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಎಲ್ಲಾ ಯಶಸ್ಸು ನೌಕರರಿಗೇ ಸೇರಬೇಕು ಎಂದ ಅವರು, ತುಮಕೂರಿನಲ್ಲಿ ನಾಗರಿಕರಿಗೆ ಪೂರಕವಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಹಾಗೂ ಯುವ ಸಮುದಾಯಕ್ಕೆ, ಕ್ರೀಡಾಸಕ್ತರಿಗೆ ಪೂರಕ ಆಟದ ಮೈದಾನಗಳು, ಅಂತಾರಾಷ್ಟ್ರೀಯ ಕ್ರೀಡಾಂಗಣಗಳನ್ನು ನಿರ್ಮಿಸುವ ಮಹತ್ತರ ಯೋಜನೆಗಳು ನಡೆದಿದ್ದು, ಮುಂಬರುವ ದಿನಗಳಲ್ಲಿ ತುಮಕೂರು ರಾಜ್ಯದಲ್ಲಿಯೇ ವಿಶೇಷ ಗಮನ ಸೆಳೆಯುವ ಜಿಲ್ಲೆಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಜಯದಿಂದ ದಿಗ್ವಿಜಯ :
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಮಾತನಾಡಿ, ತುಮಕೂರು ಅತಿ ವೇಗದಲ್ಲಿ ಬೆಳೆಯುತ್ತಿರುವ ಜಿಲ್ಲೆಯಾಗಿದ್ದು, ರಾಜಧಾನಿ ಬೆಂಗಳೂರು ನಂತರ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ಜಿಲ್ಲೆ ತುಮಕೂರು ಎಂಬುದು ಹೆಮ್ಮೆ ಎಂದರು.
ಯಾವುದೇ ರಾಜಕೀಯ ಪ್ರೇರಿತವಿಲ್ಲದ, ಧರ್ಮಲೇಪಿತವಲ್ಲದ ವೇದಿಕೆಯೆಂದರೆ ಅದು ಕ್ರೀಡಾವೇದಿಕೆ ಎಂದ ಅವರು, ಕ್ರೀಡೆಯಲ್ಲಿ ಸೋಲುಗಳಿಗೆ ವಿಚಲಿತರಾಗುವ ಅಗತ್ಯವಿಲ್ಲ. ಒಂದು ಸೋಲಿನ ನಂತರದ ಗೆಲುವು ಜಯವಷ್ಟೆ, ಎರಡು ಸೋಲಿನ ಬಳಿಕ ಬಂದ ಗೆಲುವು ವಿಜಯ. ಮೂರಕ್ಕಿಂತ ಹೆಚ್ಚು ಬಾರಿ ಸೋತು ಗೆದ್ದರೆ ಅದನ್ನು ದಿಗ್ವಿಜಯ ಎಂದು ನಾವು ಅಥೈಸಿಕೊಳ್ಳಬೇಕು. ಕ್ರೀಡೆ ಸೌಹಾರ್ಧತೆಯ ತೊಟ್ಟಿಲು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ರೀಮತಿ ನಾಹಿದಾ ಜ್ಹಮ್ ಜ್ಹಮ್,ತಹಸೀಲ್ದಾರ್ ಪಿ.ಎಸ್.ರಾಜೇಶ್ವರಿ,ರಮೇಶ್ ಎಚ್.ಇ., ಶುಭ ಬಿ., ರಂಗಪ್ಪ, ರೋಹಿತ್ ಗಂಗಾಧರ್, ಹನುಮಂತಪ್ಪ, ಆರ್. ಪರಮೇಶ್ವರ, ಮೋಹನ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
