ಹಾಸನ: ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ವಾಸಿಸುವ ನಗರದ ವಿದ್ಯಾನಗರ ಬಡಾವಣೆಯ ಮನೆ ಸಮೀಪದ ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಇಂದು ತೀವ್ರ ಜಟಾಪಟಿ ನಡೆದಿದೆ. ವಿದ್ಯಾನಗರ ಬಡಾವಣೆಯಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.
ಪುಷ್ಪಾ ಅವರು ನಿವೇಶನದ ಬಳಿ ಆಗಮಿಸಿದ ವೇಳೆ, ಜಿಪಿಎ (GPA) ಹೋಲ್ಡರ್ ದೇವರಾಜು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪುಷ್ಪಾ ಅವರು ದೇವರಾಜು ಅವರನ್ನು ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುವಂತೆ ಪ್ರಶ್ನಿಸಿದರು.
“ಮೊದಲು ದಾಖಲೆಗಳನ್ನು ತೋರಿಸಿ” ಎಂದು ಪುಷ್ಪಾ ಒತ್ತಾಯಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಯಿತು.“ನಾನು ಸೆಲೆಬ್ರಿಟಿ ತಾಯಿ ಅಂತ ಇಲ್ಲಿ ಬಂದಿಲ್ಲ. ನಾನು ಇಲ್ಲಿ ಹುಟ್ಟಿ ಬೆಳೆದವಳು!” ಎಂದಿದ್ದಲ್ಲದೆ ಇನ್ನು ಮುಂದೆ“ ನಿವೇಶನದೊಳಗೆ ಕಾಲಿಡಬೇಡಿ” ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ದೇವರಾಜು,“ಈ ರೀತಿ ಮಾತನಾಡಬಾರದು” ಎಂದು ಹೇಳಿದರು.
ಇದರಿಂದ ಆಕ್ರೋಶಗೊಂಡ ಪುಷ್ಪಾ ಕಠಿಣವಾಗಿ ಪ್ರತಿಕ್ರಿಯಿಸಿ,
“ರೌಡಿಗಳನ್ನು ಕರೆದುಕೊಂಡು ರೌಡಿಸಂ ಮಾಡ್ತಿಯಾ? ನಾನು ಇದರ ಬಗ್ಗೆ ಎಸ್ಪಿ ಅವರಿಗೆ ದೂರು ನೀಡ್ತೀನಿ. ಇನ್ನು ಮುಂದೆ ಇಲ್ಲಿಗೆ ಕಾಲಿಟ್ಟರೆ ಸುಮ್ಮನಿರಲ್ಲ!” ಎಂದು ಗುಡುಗಿದರು.
ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಈ ಹಿಂದೆಯೇ ನಿವೇಶನಕ್ಕೆ ಸಂಬಂಧಿಸಿದ ಕಾಂಪೌಂಡ್ ಗೋಡೆ ಧ್ವಂಸದ ಆರೋಪಗಳು ಕೇಳಿ ಬಂದಿದ್ದು, ಪುಷ್ಪಾ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದನ್ನು ಸ್ಮರಿಸಬಹುದು.
