ತುಮಕೂರು :ಶಿಕ್ಷಣ ಕ್ಷೇತ್ರವೇ ರಾಷ್ಟçನಿರ್ಮಾಣದ ಮೂಲಾಧಾರ ಎಂಬ ದೃಢ ನಂಬಿಕೆಯೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ರೂಪ್ಸಾ ಸಂಘಟನೆಯ ತುಮಕೂರು ಜಿಲ್ಲಾ ಅಧ್ಯಕ್ಷರಾಗಿ ಶಿಕ್ಷಣತಜ್ಞರು ಹಾಗೂ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್.ಬಿ.ಪ್ರದೀಪ್ ಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ರೂಪ್ಸಾ ಸಂಘಟನೆಯ ಜಿಲ್ಲಾ ಮಟ್ಟದ ಸಭೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆ, ಸಂಘಟನಾ ಸಾಮರ್ಥ್ಯ, ನಾಯಕತ್ವ ಗುಣಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾದ ಅವರ ಸ್ಪಷ್ಟ ನಿಲುವುಗಳನ್ನು ಪರಿಗಣಿಸಿ, ಎಲ್ಲ ಸದಸ್ಯರ ಸಹಮತದೊಂದಿಗೆ ಅವರನ್ನು ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಈಗಾಗಲೇ ರೂಪ್ಸಾ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಎನ್.ಬಿ.ಪ್ರದೀಪ್ ಕುಮಾರ್ ಅವರು, ರಾಜ್ಯಾದ್ಯಂತ ಖಾಸಗಿ ಅನುದಾನರಹಿತ ಶಾಲೆಗಳು ಎದುರಿಸುತ್ತಿರುವ ಸವಾಲುಗಳು, ಶಿಕ್ಷಕರ ಗೌರವ ಹಾಗೂ ಭದ್ರತೆ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಮತ್ತು ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಸದಾ ಸ್ಪಷ್ಟ, ದೃಢ ಹಾಗೂ ಜನಪರ ನಿಲುವು ಹೊಂದಿರುವ ನಾಯಕರೆಂದು ಪರಿಚಿತರಾಗಿದ್ದಾರೆ.
ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು,“ಶಿಕ್ಷಣವೆಂದರೆ ಕೇವಲ ಪಠ್ಯವಷ್ಟೇ ಅಲ್ಲ; ಅದು ಶಿಸ್ತು, ಮೌಲ್ಯಗಳು, ಮಾನವೀಯತೆ ಮತ್ತು ರಾಷ್ಟ್ರಭಾವನೆಯನ್ನು ರೂಪಿಸುವ ಶಕ್ತಿಯಾಗಿದೆ. ಖಾಸಗಿ ಶಾಲೆಗಳು ದೇಶದ ಮಾನವ ಸಂಪನ್ಮೂಲ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಈ ಕಾರಣದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಹಕ್ಕುಗಳ ರಕ್ಷಣೆ, ಶಿಕ್ಷಕರ ಗೌರವ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ನಮ್ಮ ಪ್ರಮುಖ ಹೊಣೆಗಾರಿಕೆ” ಎಂದು ಹೇಳಿದರು.
ರೂಪ್ಸಾ ರಾಜ್ಯಾಧ್ಯಕ್ಷರಾಗಿ ಡಾ. ಹಾಲನೂರು ಎಸ್. ಲೇಪಾಕ್ಷಿ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ.ತುಮಕೂರು ಜಿಲ್ಲಾ ನೂತನ ಪದಾಧಿಕಾರಿಗಳಾಗಿಶ್ರೀನಿವಾಸ್ ಕಾರ್ಯದರ್ಶಿ, ನಯಾಜ್ ಅಹಮ್ಮದ್ ಉಪಾಧ್ಯಕ್ಷರು ಟಿ. ಚಂದ್ರಶೇಖರ್ ಖಜಾಂಚಿ, ಸಹ ಕಾರ್ಯದರ್ಶಿಗಳು : ನಿಖಿಲ್ ಮಿರ್ಜಿ ಮತ್ತು ಅಮಿತ್ ಬಿ.ಎಂ.ರವರುಗಳು ಆಯ್ಕೆಯಾಗಿದ್ದಾರೆ.
ವರದಿ : ಕೆ ಬಿ ಚಂದ್ರಚೂಡ್
