ತುಮಕೂರು: ಮುಂಬರುವ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು, ರಾಜ್ಯ ಸರ್ಕಾರದ ಬಡವರ ಪರವಾದ ಯೋಜನೆಗಳ ಬಗ್ಗೆ ಹಳ್ಳಿಹಳ್ಳಿಯಲ್ಲೂ ಪ್ರಚಾರ ನಡೆಸಿ ಪಕ್ಷವನ್ನು ಸದೃಢವಾಗಿ ಸಂಘಟನೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಶ್ರೀನಿವಾಸ್ ಹೇಳಿದರು.
ಗ್ರಾಮಾಂತರ ಕ್ಷೇತ್ರದ ನಾಗವಲ್ಲಿ ಸಮೀಪದ ಬಡೇಸಾಬರ ಪಾಳ್ಯದಲ್ಲಿ ಕಾಂಗ್ರೆಸ್ ಸಂಘಟನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶೀಘ್ರದಲ್ಲೇ ನಡೆಯಲಿರುವ ಚುನಾವಣೆಗಳಿಗೆ ಜನಬೆಂಬಲ ಪಡೆಯಲು ತಾವು ಕ್ಷೇತ್ರಾದ್ಯಂತ ಪ್ರಚಾರ ಸಭೆಗಳನ್ನು ನಡೆಸಿ ಪಕ್ಷದ ಬಲವರ್ಧನೆ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.
ಪಂಚ ಗ್ಯಾರಂಟಿ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು ಎರಡು ಸಾವಿರ ರೂ, ಶಕ್ತಿ ಯೋಜನೆಯಡಿ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣ ಅಲ್ಲದೆ, ಅನೇಕ ಜನೋಪಯೋಗಿ ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು ಲಕ್ಷಾಂತರ ಜನರ ಅದರ ಪ್ರಯೋಜ ಪಡೆಯುತ್ತಿದ್ದಾರೆ. ಇಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಸರ್ಕಾರದ ಒಂದಲ್ಲೊಂದು ಯೋಜನೆಯ ಫಲಾನುಭವಿಗಳೇ ಆಗಿದ್ದಾರೆ. ನೀವೆಲ್ಲಾ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು. ಜನಪರವಾದ ಸರ್ಕಾರ ರಾಜ್ಯದಲ್ಲಿರುವಾಗ ಸ್ಥಳೀಯವಾಗಿಯೂ ಜನಪರವಾದ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ತರಲು ಪ್ರತಿಯೊಬ್ಬರೂ ಸಂಕಲ್ಪ ಮಾಡಿ ಚುನಾವಣೆ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ನಾನು ಕಾಂಗ್ರೆಸ್ ಪಕ್ಷಕ್ಕೆ ಹೊರಗಿನಿಂದ ಬಂದವನಲ್ಲ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ, ನಾನು ಕ್ಷೇತ್ರ ಬಿಟ್ಟು ಓಡಿಹೋಗುವುದಿಲ್ಲ. ನನ್ನ ಜೊತೆ ಶ್ರಮಿಸುವ ಎಲ್ಲರನ್ನೂ ನನ್ನೊಂದಿಗೆ ಕರೆದೊಯ್ಯುತ್ತೇನೆ. ನಿಷ್ಠಾವಂತ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವತ್ತೂ ಸೂಕ್ತಸ್ಥಾನಮಾನ, ಗೌರವ ಇದ್ದೇಇರುತ್ತದೆ ಎಂದು ಎಸ್.ಟಿ.ಶ್ರೀನಿವಾಸ್ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡ ಇರ್ಫಾನ್ ಮಾತನಾಡಿದರು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲೋಕೇಶ್, ಮುಖಂಡರಾದ ಉಮಾಶಂಕರ್, ಅಲ್ಲಾ ಬಕಾಶ್, ಮಹಮದ್ ಹುಸೇನ್, ಬಾಷಾ ಸಾಬ್ ಮತ್ತಿತರರು ಭಾಗವಹಿಸಿದ್ದರು. ಇದಕ್ಕೂ ಮೊದಲು ಬಡೇಸಾಬರಪಾಳ್ಯದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ವರದಿ : ಕೆ ಬಿ ಚಂದ್ರಚೂಡ್
