ಚಳಿಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು ಸಾಮಾನ್ಯ. ಪರಿಣಾಮವಾಗಿ ಶೀತ, ಕೆಮ್ಮು, ಜ್ವರದಂತಹ ಕಾಲೋಚಿತ ಕಾಯಿಲೆಗಳಿಗೆ ದೇಹ ಬೇಗ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಹೀಗಾಗಿ ಈ ಋತುಮಾನದಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಿಡುವ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವನೆ ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿ ಆರೋಗ್ಯ ತಜ್ಞರು ನಿಯಮಿತವಾಗಿ ಖರ್ಜೂರ (Dates) ಮತ್ತು ಬಾದಾಮಿಯಂತಹ ಒಣಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವಂತೆ ಸಲಹೆ ನೀಡುತ್ತಾರೆ.
ಖರ್ಜೂರ ಮತ್ತು ಬಾದಾಮಿ ಎರಡೂ ಆರೋಗ್ಯಕರವಾದರೂ, ಅವುಗಳ ಪ್ರಯೋಜನಗಳು ವಿಭಿನ್ನವಾಗಿವೆ. ಯಾವುದು ಹೆಚ್ಚು ಉಪಯುಕ್ತ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಖರ್ಜೂರ ಸೇವನೆಯ ಪ್ರಯೋಜನಗಳು:
ಖರ್ಜೂರದಲ್ಲಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ನಂತಹ ನೈಸರ್ಗಿಕ ಸಕ್ಕರೆಗಳಿದ್ದು, ಸೇವಿಸಿದ ತಕ್ಷಣ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಬೆಳಿಗ್ಗೆ 2–3 ಖರ್ಜೂರ ತಿನ್ನುವುದರಿಂದ ಆಯಾಸ ಕಡಿಮೆಯಾಗುತ್ತದೆ. ಕಬ್ಬಿಣದ ಅಂಶ ಹೆಚ್ಚು ಇರುವುದರಿಂದ ಹಿಮೋಗ್ಲೋಬಿನ್ ಕೊರತೆ ಮತ್ತು ಚಳಿಗಾಲದ ದೌರ್ಬಲ್ಯವನ್ನು ತಡೆಯಲು ಸಹಕಾರಿ. ಇದರಲ್ಲಿರುವ ನಾರು ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವೂ ಖರ್ಜೂರದಲ್ಲಿದೆ. ಆದರೆ ಮಿತವಾಗಿ ಸೇವಿಸುವುದು ಅಗತ್ಯವೆಂದು ತಜ್ಞರು ಸೂಚಿಸುತ್ತಾರೆ.
ಬಾದಾಮಿ ಸೇವನೆಯ ಪ್ರಯೋಜನಗಳು:
ಬಾದಾಮಿ ತಕ್ಷಣ ಶಕ್ತಿ ನೀಡದಿದ್ದರೂ, ದೀರ್ಘಕಾಲದವರೆಗೆ ನಿರಂತರ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿರುವ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ದೇಹವನ್ನು ಬಲವಾಗಿ ಹಾಗೂ ಬೆಚ್ಚಗಿಡಲು ಸಹಾಯ ಮಾಡುತ್ತದೆ. ವಿಟಮಿನ್ ಇ ಸಮೃದ್ಧವಾಗಿರುವ ಬಾದಾಮಿ, ಚಳಿಗಾಲದಲ್ಲಿ ಚರ್ಮ ಒಣಗುವುದನ್ನು ತಡೆಯಲು ಸಹಕಾರಿ. ಜೊತೆಗೆ ಮೆದುಳಿನ ಆರೋಗ್ಯವನ್ನು ಕಾಪಾಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೇವಿಸುವ ಬಾದಾಮಿ ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಉಪಯುಕ್ತ.
ಹಾಗಾದರೆ ಚಳಿಗಾಲಕ್ಕೆ ಯಾವುದು ಉತ್ತಮ?
ಚಳಿಗಾಲದಲ್ಲಿ ಖರ್ಜೂರ ಮತ್ತು ಬಾದಾಮಿ ಎರಡೂ ಅಗತ್ಯ. ತಕ್ಷಣ ಶಕ್ತಿ ಬೇಕಾದವರಿಗೆ ಖರ್ಜೂರ ಉತ್ತಮ ಆಯ್ಕೆಯಾಗಿದ್ದರೆ, ದೀರ್ಘಕಾಲದ ಶಕ್ತಿ, ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು ಬಾದಾಮಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಆಹಾರದಲ್ಲಿ ಎರಡನ್ನೂ ಸಮತೋಲನದಿಂದ ಸೇರಿಸಿಕೊಳ್ಳುವುದು ಅತ್ಯುತ್ತಮ. ತಜ್ಞರ ಪ್ರಕಾರ, ಬೆಳಿಗ್ಗೆ 10–12 ನೆನೆಸಿದ ಬಾದಾಮಿ ಸೇವಿಸುವುದು ಚಳಿಗಾಲದಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ.
