ನವದೆಹಲಿ: ಟಿಬೆಟ್ನ ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರು ವಿಶ್ವದ ಅತ್ಯುನ್ನತ ಸಂಗೀತ ಹಾಗೂ ಆಡಿಯೋ ಕ್ಷೇತ್ರದ ಗೌರವವಾದ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಡಿಯೊ ಪುಸ್ತಕ, ನಿರೂಪಣೆ ಮತ್ತು ಕಥೆ ಹೇಳುವಿಕೆ ವಿಭಾಗದಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಸಂಗೀತ ಕ್ಷೇತ್ರದ ಶ್ರೇಷ್ಠ ಗೌರವವಾಗಿ ಪರಿಗಣಿಸಲಾಗುತ್ತದೆ.
ಲಾಸ್ ಏಂಜಲೀಸ್ನಲ್ಲಿ ನಡೆದ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ದಲೈ ಲಾಮಾ ಅವರ ‘ಮೆಡಿಟೇಷನ್ಸ್: ದಿ ರಿಫ್ಲೆಕ್ಷನ್ಸ್ ಆಫ್ ಹಿಸ್ ಹೋಲಿನೆಸ್ ದಿ ದಲೈ ಲಾಮಾ’ ಕೃತಿಗೆ ಈ ಗೌರವ ಲಭಿಸಿದೆ. ಪ್ರಶಸ್ತಿ ದೊರೆತ ಕುರಿತು ಪ್ರತಿಕ್ರಿಯಿಸಿರುವ ದಲೈ ಲಾಮಾ, “ಇದು ನನ್ನ ವೈಯಕ್ತಿಕ ಸಾಧನೆಯಲ್ಲ. ಜಾಗತಿಕ ಹೊಣೆಗಾರಿಕೆ, ಸಹಾನುಭೂತಿ ಮತ್ತು ಮಾನವೀಯ ಮೌಲ್ಯಗಳಿಗೆ ಸಂದ ಮನ್ನಣೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಈ ಪ್ರಶಸ್ತಿಯನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ. ಶಾಂತಿ, ಸಹಾನುಭೂತಿ, ಪರಿಸರ ಸಂರಕ್ಷಣೆ, ಮಾನವೀಯ ಏಕತೆ ಮತ್ತು ಎಂಟು ಶತಕೋಟಿ ಜನರ ಯೋಗಕ್ಷೇಮ ಅತ್ಯಗತ್ಯ ಎಂದು ನಾನು ನಂಬಿದ್ದೇನೆ. ಈ ಸಂದೇಶವನ್ನು ಇನ್ನಷ್ಟು ವ್ಯಾಪಕವಾಗಿ ಪಸರಿಸಲು ಗ್ರ್ಯಾಮಿ ಪ್ರಶಸ್ತಿ ಪ್ರೇರಣೆಯಾಗಲಿದೆ” ಎಂದು ಅವರು ಹೇಳಿದ್ದಾರೆ.
ನೇರಳೆ ಬಣ್ಣದ ನಿಲುವಂಗಿ, ದೊಡ್ಡ ಕನ್ನಡಕ ಮತ್ತು ಸರಳ ಚಪ್ಪಲಿಗಳೊಂದಿಗೆ ಕಾಣಿಸಿಕೊಳ್ಳುವ ದಲೈ ಲಾಮಾ, ಜಾಗತಿಕ ಸೆಲೆಬ್ರಿಟಿಗಳ ನಡುವೆ ತಮ್ಮ ಸರಳತೆಯಿಂದಲೇ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.
1959ರಲ್ಲಿ ಚೀನಾ ಸೇನೆಯ ಅತಿಕ್ರಮಣದ ನಂತರ ಜೀವಭಯಕ್ಕೆ ಒಳಗಾಗಿ, 23ನೇ ವಯಸ್ಸಿನಲ್ಲಿ ಟಿಬೆಟ್ನ ರಾಜಧಾನಿ ಲಹಸಾದಿಂದ ಭಾರತಕ್ಕೆ ಬಂದ ದಲೈ ಲಾಮಾ, ಇಲ್ಲಿ ಆಶ್ರಯ ಪಡೆದಿದ್ದರು. ಅಂದಿನಿಂದ ಅವರು ಮತ್ತೆ ತಮ್ಮ ದೇಶಕ್ಕೆ ಮರಳಿಲ್ಲ.
ದಲೈ ಲಾಮಾಗೆ ಪ್ರಶಸ್ತಿ: ಚೀನಾ ಆಕ್ಷೇಪ
ಬೀಜಿಂಗ್: ದಲೈ ಲಾಮಾ ಅವರಿಗೆ ಗ್ರ್ಯಾಮಿ ಪ್ರಶಸ್ತಿ ನೀಡಿರುವುದನ್ನು ಚೀನಾ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಲಿನ್ ಜಿಯಾನ್, “ಧರ್ಮದ ಹೆಸರಿನಲ್ಲಿ ದಲೈ ಲಾಮಾ ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸಂಪೂರ್ಣ ಧಾರ್ಮಿಕ ವ್ಯಕ್ತಿಯಲ್ಲ” ಎಂದು ಆರೋಪಿಸಿದ್ದಾರೆ.
“ಚೀನಾ ವಿರೋಧಿ ಚಟುವಟಿಕೆಗಳಿಗೆ ಮಾನ್ಯತೆ ನೀಡುವ ಯಾವುದೇ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ” ಎಂದು ಲಿನ್ ಜಿಯಾನ್ ಹೇಳಿದ್ದಾರೆ.
