ಬೇಲೂರು : ತಾಲೂಕಿನ ಬಕ್ರವಳ್ಳಿ ಗ್ರಾಮದ ಸಮೀಪ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ಭಾನುವಾರ ಮಧ್ಯಾಹ್ನ ತಂದೆ ಹಾಗೂ ಮಗನ ಮೇಲೆ ಕಾಡಾನೆಯೊಂದು ದಾಳಿ ನಡೆಸಲು ಮುಂದಾದ ಘಟನೆ ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.
ಬಕ್ರವಳ್ಳಿ ಗ್ರಾಮದ ನಿವಾಸಿಗಳಾದ ನಾಗರಾಜು ಹಾಗೂ ಅವರ ಪುತ್ರ ವೇದರಾಜು ತಮ್ಮ ತೋಟದಲ್ಲಿ ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ತೋಟದ ಸಮೀಪ ಅಡಗಿಕೊಂಡಿದ್ದ ಕಾಡಾನೆಯೊಂದು ಏಕಾಏಕಿ ಅವರ ಮುಂದೆ ಬಂದು ದಾಳಿ ನಡೆಸಲು ಸಜ್ಜಾಯಿತು.

ಅಪಾಯವನ್ನು ಗಮನಿಸಿದ ನಾಗರಾಜು ಹಾಗೂ ವೇದರಾಜು ತಕ್ಷಣವೇ ತಮ್ಮ ದ್ವಿಚಕ್ರ ವಾಹನವನ್ನು ಹಿಂದಕ್ಕೆ ತಿರುಗಿಸಿ ವೇಗವಾಗಿ ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಕಾಡಾನೆಯೂ ಅದೇ ವೇಗದಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದು, ಸುಮಾರು 100 ಮೀಟರ್ ದೂರವರೆಗೆ ಅಟ್ಟಾಡಿಸಿದೆ. ಕೆಲ ಕ್ಷಣಗಳು ಪ್ರಾಣಾಪಾಯದ ಸ್ಥಿತಿ ನಿರ್ಮಾಣವಾಗಿದ್ದು, ತಂದೆ–ಮಗನಿಗೆ ಭಯಾನಕ ಅನುಭವ ಎದುರಾಯಿತು.
ಅದೃಷ್ಟವಶಾತ್, ಸ್ವಲ್ಪ ಸಮಯದ ಬಳಿಕ ಕಾಡಾನೆ ಹಿಂದಿರುಗಿದ್ದು, ನಾಗರಾಜು ಹಾಗೂ ವೇದರಾಜು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇತ್ತೀಚಿನ ದಿನಗಳಲ್ಲಿ ಬಿಕ್ಕೊಡು, ಅರೇಹಳ್ಳಿ ಹೋಬಳಿಗಳ ಗ್ರಾಮಗಳಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗಿದ್ದು, ರೈತರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ. ತೋಟಗಳಿಗೆ ಕೆಲಸಕ್ಕೆ ಹೋಗುವ ರೈತರು ಜೀವಭಯದಿಂದ ಕೆಲಸ ಮಾಡುವಂತಾಗಿದೆ. ಕಾಡಾನೆಗಳಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು, ಗಸ್ತು ಹೆಚ್ಚಿಸಬೇಕು ಹಾಗೂ ಎಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
