ಬೆಂಗಳೂರು, ಫೆಬ್ರವರಿ 3: ವಿಧಾನಸಭಾ ಸದನದಲ್ಲಿ ಇಂದು ಅಬಕಾರಿ ಇಲಾಖೆಯ ಭ್ರಷ್ಟಾಚಾರ ವಿಚಾರ ಭಾರಿ ಸದ್ದು ಮಾಡಿತು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತು ಪ್ರಸ್ತಾಪಿಸಿ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸದನದಲ್ಲಿ ಮಾತನಾಡಿದ ಅಶೋಕ್, “ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ಇದೆ ಎಂದು ಸಚಿವ ತಿಮ್ಮಾಪುರ ಹೇಳುತ್ತಾರೆ. ಆದರೆ ಇತ್ತೀಚೆಗೆ ಸಚಿವರಿಗೆ ಪಾಲು ಕೊಡಬೇಕು ಎಂಬ ಆಡಿಯೋ ವೈರಲ್ ಆಗಿತ್ತು” ಎಂದು ಹೇಳಿದರು.
ಈ ವೇಳೆ ಆರ್. ಅಶೋಕ್ ಅವರು ಸದನದಲ್ಲಿ ಪೆನ್ ಡ್ರೈವ್ ಪ್ರದರ್ಶಿಸಿ, ತಮ್ಮ ಬಳಿ ಸಚಿವ ತಿಮ್ಮಾಪುರ ಅವರ ಹೆಸರು ಉಲ್ಲೇಖವಾಗಿರುವ ಆಡಿಯೋ ದಾಖಲೆ ಇದೆ ಎಂದು ಆರೋಪಿಸಿದರು. ಆ ಆಡಿಯೋದಲ್ಲಿ ಅಬಕಾರಿ ಇಲಾಖೆಯ ಜಂಟಿ ಆಯುಕ್ತ ನಾಗರಾಜಪ್ಪ ಅವರು 18 ಲಕ್ಷ ರೂಪಾಯಿ ಬೇಡಿಕೆ ಇಟ್ಟಿರುವುದು ಹಾಗೂ ಸಚಿವರ ಹೆಸರು ಉಲ್ಲೇಖವಾಗಿರುವುದು ಕೇಳಿಸುತ್ತದೆ ಎಂದು ಹೇಳಿದರು.
‘ತಿಂಗಳಿಗೆ 21 ಕೋಟಿ ಕಮಿಷನ್’ ಆರೋಪ
ರಾಜ್ಯದಲ್ಲಿ ಮದ್ಯದ ಅಂಗಡಿಗಳಿಗೆ ಪ್ರತಿ ತಿಂಗಳು ಕಮಿಷನ್ ನಿಗದಿಪಡಿಸಲಾಗಿದೆ ಎಂದು ಆರ್. ಅಶೋಕ್ ಆರೋಪಿಸಿದರು. “ಒಂದು ತಿಂಗಳಿಗೆ ಸುಮಾರು 21 ಕೋಟಿ ರೂ., ಒಂದು ವರ್ಷಕ್ಕೆ 250 ಕೋಟಿ ರೂ. ಕಮಿಷನ್ ಸಚಿವರಿಗೆ ಹೋಗುತ್ತಿದೆ ಎಂಬ ಆರೋಪಗಳಿವೆ” ಎಂದು ಅವರು ಸದನದಲ್ಲಿ ಹೇಳಿದರು.
ಈ ಆರೋಪಗಳ ಬೆನ್ನಲ್ಲೇ ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾಯಿತು. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪೆನ್ ಡ್ರೈವ್ ಪ್ರಕರಣವು ಸದನದಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು.
ಅಬಕಾರಿ ಇಲಾಖೆಯ ಭ್ರಷ್ಟಾಚಾರ ಕುರಿತು ನ್ಯಾಯಾಂಗ ಅಥವಾ ಸ್ವತಂತ್ರ ತನಿಖೆ ನಡೆಸಬೇಕೆಂದು ವಿರೋಧ ಪಕ್ಷ ಒತ್ತಾಯಿಸಿದ್ದು, ಸರ್ಕಾರದ ಪ್ರತಿಕ್ರಿಯೆಗಾಗಿ ಸದನ ಕಾಯುತ್ತಿದೆ.
