ಕೆ.ಆರ್.ಪೇಟೆ,ಫೆ.03 : ಅಲಂಬಾಡಿಕಾವಲು ಗ್ರಾಮವು ರಾಜ್ಯದಲ್ಲಿಯೇ ಹಿಂದೂ-ಮುಸ್ಲಿಂ ಬಂಧುಗಳ ಭಾವೈಕ್ಯತೆಯ ಕೇಂದ್ರ ಸ್ಥಳವಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಹೆಚ್.ವಿಶ್ವನಾಥ್ ಹೇಳಿದರು.
ಅವರು ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಲಂಬಾಡಿಕಾವಲು ಗ್ರಾಮದ ಶ್ರೀ ಮಾರಮ್ಮ ತಾಯಿ ದೇವಾಲಯ ಉದ್ಘಾಟನಾ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ದಂಪತಿ ಸಮೇತರಾಗಿ ಪಾಲ್ಗೊಂಡ ಬಳಿಕ ಮಾತನಾಡಿದರು. ಆಲಂಬಾಡಿ ಕಾವಲು ಗ್ರಾಮ ಹಿಂದೂ ಮುಸ್ಲಿಂ ಭಾವೈಕ್ಯತೆ ಒಳಗೊಂಡ ಗ್ರಾಮವಾಗಿದೆ. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಸಮಾಜ ಸೇವೆ ಮೂಲಕ ಜನಾನುರಾಗಿ ಉತ್ತಮ ಆರ್.ಟಿ.ಓ ಅಧಿಕಾರಿಯಾಗಿರುವ ಮಲ್ಲಿಕಾರ್ಜುನ್ ಗ್ರಾಮದ ಎರಡು ಧರ್ಮಗಳ ಹಿರಿಯ ಮತ್ತು ಹಿರಿಯ ಮುಖಂಡರನ್ನು ಜೊತೆಗೂಡಿಸಿಕೊಂಡು ಈ ದೇವಾಲಯ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರಾಗಿ ಗ್ರಾಮದ ಅಭಿವೃದ್ಧಿಗೆ ಸಹಕರಿಸುತ್ತಿರುವುದು ಶ್ಲಾಘನೀಯವಾದುದು.
ಆ ನಿಟ್ಟಿನಲ್ಲಿ ಗ್ರಾಮ ದೇವತೆ ಶ್ರೀ ಮಾರಮ್ಮ ಸುಂದರ ದೇವಾಲಯ ನಿರ್ಮಿಸಿ ಉದ್ಘಾಟನೆಗೊಂಡಿದೆ. ಉದ್ಘಾಟನೆಗೆ ಗ್ರಾಮದರುವ ಮುಸ್ಲಿಂ ಸಮುದಾಯದ ಜನತೆ ಇದು ಹಿಂದೂಗಳ ದೇವಾಲಯ ಎಂಬ ಬೇದ ಭಾವವಿಲ್ಲದೆ ಸೌಹಾರ್ದತೆಯಿಂದ ಪಾಲ್ಗೊಂಡು ಜಾತಿ ಧರ್ಮದ ಹಂಗಿಲ್ಲದೇ ಎಲ್ಲರೂ ಒಗ್ಗಟ್ಟಿನಿಂದ ಸೌಹಾರ್ದ ಜೀವನ ನಡೆಸುವ ಗ್ರಾಮ ಆಲಂಬಾಡಿಕಾವಲು ಗ್ರಾಮವಾಗಿದೆ.
ನನ್ನ ಗ್ರಾಮ ಈ ಗ್ರಾಮದಿಂದ ಕೇವಲ ಮೂರು ಕಿ.ಮೀ ದೂರದಲ್ಲಿದೆ. ಈ ಗ್ರಾಮದಲ್ಲಿ ನನಗೆ ಸಂಬಂಧಿಕರೇ ಹೆಚ್ಚು, ನನ್ನ ಧರ್ಮಪತ್ನಿಯ ಹುಟ್ಟೂರು ಸಹ ಈ ಗ್ರಾಮವಾಗಿದೆ ಹಾಗಾಗಿ ಈ ಗ್ರಾಮದ ಮೇಲೆ ವಿಶೇಷ ಪ್ರೀತಿಯ ಅಭಿಮಾನವಿದೆ. ಇಲ್ಲಿ ಮುಸ್ಲಿಮರ ಹಬ್ಬಗಳಿಗೆ ಹಿಂದೂಗಳು, ಹಿಂದೂಗಳ ಹಬ್ಬಗಳ ಮುಸ್ಲಿಮರು ಪರಸ್ಪರ ಭಾಗವಹಿಸುವ ಮೂಲಕ ಭಾವೈಕ್ಯತೆಯನ್ನು ಬೆಳೆಸಿಕೊಂಡಿದ್ದಾರೆ.
ಗ್ರಾಮಗಳಲ್ಲಿ ದೇವಾಲಯಗಳಿದ್ದರೆ ಜನರು ಭಯ, ಭಕ್ತಿಯಿಂದ ಜೀವನ ನಡೆಸುತ್ತಾರೆ. ದೇವಾಲಯಗಳು ನಾಡಿನ ಆಚಾರ ಕೇಂದ್ರಗಳಾಗಿ ಪ್ರತಿಯೊಂದು ಗ್ರಾಮಗಳಲ್ಲಿರಬೇಕು. ಪೂರ್ವಿಕರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ಸಾಗಬೇಕು ಎಂದು ಹೇಳಿದ ಅವರು ಆಚಾರಕ್ಕೆ ದೇವಾಲಯ, ವಿಚಾರಕ್ಕೆ ಶಾಲೆ, ಜೀವ ಜಲಕ್ಕೆ ಕೆರೆ ಕಟ್ಟೆಗಳಿದ್ದರೆ, ಗ್ರಾಮೀಣ ಭಾಗವು ಸಮೃದ್ಧಿಯಾಗಿ ಸಮಾತೋಲನದಿಂದ ಕೂಡಿರುತ್ತದೆ ನಮ್ಮ ಹಿರಿಯರ ಸಂಪ್ರದಾಯವನ್ನು ಇಂದಿನ ಯುವ ಜನತೆ ಪಾಲಿಸಬೇಕು.ನಮ್ಮಿಂದ ಸಾಧ್ಯವಾದಷ್ಟು ಮತ್ತೊಬ್ಬರಿಗೆ ದಾನ ನೀಡುವುದರಿಂದ ಘನತೆ ಜತೆಗೆ ಜೀವನದಲ್ಲಿ ಯಶಸ್ಸು ಸಿಗಲಿದೆ ಎಂದ ಹೆಚ್ ವಿಶ್ವನಾಥ್ ಅವರು ಭಕ್ತರಿಗೆ ಸ್ವತಃ ಅನ್ನ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಿದರು.
ನೂತನ ಶ್ರೀ ಮಾರಮ್ಮ ದೇವಾಲಯದ ಸಂಪೂರ್ಣ ನಿರ್ಮಾಣದ ಕಾರ್ಯವನ್ನು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ವಹಿಸಿಕೊಂಡಿದ್ದರು.
ದೇವಾಲಯ ಉದ್ಘಾಟನೆಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ 5 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಗ್ರಾಮಸ್ಥರ ಸಹಕಾರದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು,
ಕಾರ್ಯಕ್ರಮದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಬಿ.ನಾಗೇಂದ್ರಕುಮಾರ್, ಮೂಡ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಕೆಯುಐಡಿಎಫ್ಸಿ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ತಾ.ಪಂ ಮಾಜಿ ಅಧ್ಯಕ್ಷ ನಂಜುಂಡೇಗೌಡ, ಸೊಸೈಟಿ ಅಧ್ಯಕ್ಷ ಮೋಹನ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಿವಾಕರ್ಮಾಸ್ತೀಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ಕರಿಶೆಟ್ಟಿ, ಗ್ರಾಮದ ಯಜಮಾನರುಗಳಾದ ತಮ್ಮೇಗೌಡ, ನಾಗರಾಜು, ವಿಜಯ ಕುಮಾರ್, ಬಸವರಾಜ್, ಶಿವರಾಮು, ಚಂದ್ರೇಗೌಡ, ಮಂಜುನಾಥ್, ರಾಜುನಾಯಕ, ವಿಶ್ವನಾಥ್, ಮಾಸ್ತಿಗೌಡ, ಸುಜೇಂದ್ರ, ಮಹೇಶ್, ಗ್ರಾ.ಪಂ ಅಧ್ಯಕ್ಷ ಮಹಮದ್ ಅತೀಕ್, ಪಠಾಣ್ಬಾಬು, ಗ್ರಾ.ಪಂ ಸದಸ್ಯರಾದ ರವಿ, ಎ. ರಾಜು, ಮುಸ್ಲಿಂ ಮುಖಂಡ ಸಿದ್ದಿಕ್, ಪಠಾಣ್, ಯುವ ಮುಖಂಡ ಮೂರ್ತಿ, ಪ್ರಮೋದ್, ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್ ಗ್ರಾಮದ ಮುಖಂಡರು ಸೇರಿದಂತೆ ಸಾವಿರಾರು ಮಂದಿ ಭಕ್ತಾಧಿಗಳು ದೇವಾಲಯ ಉದ್ಘಾಟನೆ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಶ್ರೀನಿವಾಸ್ ಆರ್
