Bhagavad Gita
ಶ್ಲೋಕ – 14
ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ ।
ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ ॥೧೪॥
ಅನುದಿನವು ನನ್ನಲ್ಲಿ ಬಗೆಯಿಟ್ಟು ನನ್ನನ್ನೆ ಸೇವಿಸುತ್ತಾರೆ. ನಿರಂತರ ನನ್ನನ್ನು ಕೊಂಡಾಡುತ್ತಾ ನೇಮಗಳನ್ನುನೆಮ್ಮಿಕೊಂಡು ಹೆಣಗುತ್ತಾ ನನಗಾಗಿ ತಲೆಬಾಗುತ್ತ.
“ದೈವೀ ಸ್ವಭಾವದವರು ನಿರಂತರ ನನ್ನನ್ನು ಕೀರ್ತನ ಮಾಡುತ್ತಾರೆ” ಎನ್ನುತ್ತಾನೆ ಕೃಷ್ಣ. ಅವರ ಪ್ರತಿಯೊಂದು ಚಟುವಟಿಕೆಯಲ್ಲೂ ಭಗವದ್ ಪ್ರಜ್ಞೆ ಗಾಢವಾಗಿರುತ್ತದೆ. ಇನ್ನೊಂದು ಅರ್ಥದಲ್ಲಿ ತತವಾದ್ಯವನ್ನು ಹಿಡಿದು, ತಂತಿಯನ್ನು ಮೀಟುತ್ತಾ ಭಗವಂತನ ಗುಣಗಾನ ಮಾಡುತ್ತಾ, ಹಾಡುತ್ತಾ(ನಾರದ ಮಹರ್ಷಿಗಳಂತೆ) ಸದಾ ಸಂತೋಷವಾಗಿರುವವರು ದೈವೀ ಸ್ವಭಾವದವರು. ಇವರು ನಿರಂತರ, ತಮ್ಮ ಗುರಿ ತಲುಪುವತನಕವೂ ದೃಡ ಧೀಕ್ಷೆಯಿಂದ, ಅನನ್ಯ ಪ್ರೀತಿಯಿಂದ ಗೌರವಿಸುತ್ತಾ ಉಪಾಸನೆ ಮಾಡುತ್ತಾರೆ. ಇವರಲ್ಲಿ ಇನ್ನೊಂದು ವಿಧದ ಭಕ್ತರನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
