ಹಾಸನ/ ಹೊಳೆನರಸೀಪುರ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇಗೌಡರು ಇತ್ತೀಚೆಗೆ ಪತ್ರಿಕಾ ಗೋಷ್ಟಿ ನಡೆಸಿ ಬಿಜೆಪಿ ನಾಯಕರುಗಳ ವಿರುದ್ಧ ಬಹಿರಂಗ ಆರೋಪಗಳನ್ನು ಮಾಡಿರುವುದು ಪಕ್ಷದ ಶಿಸ್ತು ಹಾಗೂ ಘನತೆಗೆ ಧಕ್ಕೆಯಾಗುವಂತಹ ನಡೆ ಎಂದು ನಂಬಿಹಳ್ಳಿಗಿರೀಶ್ ಅವರು ತೀವ್ರವಾಗಿ ಖಂಡಿಸಿದರು.
ಭಾರತೀಯ ಜನತಾ ಪಾರ್ಟಿ ದೇಶ ಮೊದಲು, ವ್ಯಕ್ತಿ ನಂತರ, ಸಿದ್ಧಾಂತಕ್ಕಾಗಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರ ಪಕ್ಷವಾಗಿದ್ದು, ಪ್ರಾಥಃಸ್ಮರಣೀಯರಾದ ದೀನದಯಾಳ್ ಉಪಾಧ್ಯಾಯರು ಹಾಗೂ ಡಾ. ಶ್ಯಾಮ ಪ್ರಸಾದ ಮುಖರ್ಜಿಯವರಿಂದ ಸ್ಥಾಪಿತವಾದ ಈ ಪಕ್ಷವು, ಪೂರ್ವ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಆದರ್ಶ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಶಿಸ್ತುಬದ್ಧ ನಾಯಕತ್ವದಲ್ಲಿ ದೇಶವ್ಯಾಪಿ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ನಂಬಿಹಳ್ಳಿ ಗಿರೀಶ್ ಅವರು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ತನ್ನದೇ ಆದ ನೀತಿ-ನಿಯಮಗಳು ಹಾಗೂ ದೂರು ಪರಿಹಾರ ವ್ಯವಸ್ಥೆ ಹೊಂದಿದೆ. ಪಕ್ಷದ ಒಳಗೆ ಯಾವುದೇ ಅಸಮಾಧಾನ ಅಥವಾ ದೂರುಗಳಿದ್ದಲ್ಲಿ, ಅದನ್ನು ಪಕ್ಷದ ವೇದಿಕೆಯಲ್ಲಿ ಮಂಡಿಸಿ ಪರಿಶೀಲನೆಗೆ ಅವಕಾಶವಿದೆ. ಆದರೆ ಅವುಗಳನ್ನು ಬಿಟ್ಟು ಮಾಧ್ಯಮಗಳ ಮುಂದೆ ಬಹಿರಂಗ ಆರೋಪಗಳನ್ನು ಮಾಡುವುದು ಪಕ್ಷವಿರೋಧಿ ನಡೆಯಾಗಿದೆ ಎಂದು ಜಿಲ್ಲಾ ನಾಯಕರು ಅಭಿಪ್ರಾಯಪಟ್ಟರು.
ಒಂದು ಪಟ್ಟಣ ಪಂಚಾಯ್ತಿ ಚುನಾವಣಾ ಟಿಕೆಟ್ ನೀಡುವಾಗಲೂ ಸೂಕ್ತ ಚರ್ಚೆ ನಡೆಸುವ ಪಕ್ಷವು, ದೇವರಾಜೇಗೌಡರನ್ನು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಮಾಡಿ ಗೌರವಿಸಿದೆ. ಇಂತಹ ಸಂದರ್ಭದಲ್ಲಿ ಅವರಿಂದಲೇ ಪಕ್ಷದ ವಿರುದ್ಧ ಆರೋಪಗಳು ಹೊರಬಂದಿರುವುದು ಅಸಮಂಜಸ ಹಾಗೂ ಖಂಡನೀಯ ಎಂದು ತಿಳಿಸಿದರು.
ದೇವರಾಜೇಗೌಡರ ಬಹಿರಂಗ ಹೇಳಿಕೆಗಳಿಂದ ಪಕ್ಷದ ವರ್ಚಸ್ಸು ಮತ್ತು ಘನತೆಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಅವರ ಪಕ್ಷವಿರೋಧಿ ಹೇಳಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರಿಗೆ ದೂರು ಸಲ್ಲಿಸಲಾಗುವುದು ಮತ್ತು ಪಕ್ಷದಿಂದ ಉಚ್ಛಟನೆ ಮಾಡಬೇಕೆಂದು
ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್, ಗಿರೀಶ್ ನಂಬಿಹಳ್ಳಿ, ವಿದ್ಯಾಪ್ರಸಾದ್, ಮೋಹನ್, ನಾರಾಯಣ್ ಗೌಡ, ಹೇಮಂತ್ ಕುಮಾರ್, ವಿದ್ಯಾಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
