ಬೆಂಗಳೂರು: ಕರ್ನಾಟಕ ವಿಧಾನಸಭೆ ಹದಿನಾರನೇ ವಿಧಾನಸಭೆಯ ಒಂಭತ್ತನೇ ಅಧಿವೇಶನದ ಮುಂದುವರೆದ ಉಪವೇಶನವು ಮಾರ್ಚ್ 6ರಿಂದ ಪುನರಾರಂಭವಾಗಲಿದೆ. ಫೆಬ್ರವರಿ 4, 2026ರಂದು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದ ಅಧಿವೇಶನವು ಇದೀಗ ಶುಕ್ರವಾರ, ಮಾರ್ಚ್ 6ರಂದು ಬೆಳಿಗ್ಗೆ 10.15ಕ್ಕೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನಸಭೆ ಸಭಾಂಗಣದಲ್ಲಿ ಸೇರಲಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆ ತಿಳಿಸಿದೆ.
ಅದೇ ದಿನ 2026–27ನೇ ಸಾಲಿನ ರಾಜ್ಯ ಆಯವ್ಯಯ (ಬಜೆಟ್) ಮಂಡನೆಯಾಗಲಿದೆ. ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿಯ ಪ್ರಕಾರ ಮಾರ್ಚ್ 7ರಂದು ಕಾರ್ಯಕಲಾಪಗಳು ಇರುವುದಿಲ್ಲ ಹಾಗೂ ಮಾರ್ಚ್ 8ರಂದು ಸಾರ್ವತ್ರಿಕ ರಜೆ ಇರಲಿದೆ.
ಮಾರ್ಚ್ 9ರಿಂದ 13ರವರೆಗೆ ಸರ್ಕಾರಿ ಕಾರ್ಯಕಲಾಪಗಳು ನಡೆಯಲಿದ್ದು, ಮಾರ್ಚ್ 12ರಂದು ಸರ್ಕಾರಿ ಮತ್ತು ಖಾಸಗಿ ಕಾರ್ಯಕಲಾಪಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಾರ್ಚ್ 14 ಮತ್ತು 15ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಮಾರ್ಚ್ 16ರಿಂದ 18ರವರೆಗೆ ಮತ್ತೆ ಸರ್ಕಾರಿ ಕಾರ್ಯಕಲಾಪಗಳು ನಡೆಯಲಿದ್ದು, ಮಾರ್ಚ್ 19ರಂದು ಸಾರ್ವತ್ರಿಕ ರಜೆ ಮತ್ತು ಮಾರ್ಚ್ 20ರಂದು ಕಾರ್ಯಕಲಾಪಗಳು ಇರುವುದಿಲ್ಲ. ಮಾರ್ಚ್ 21 ಹಾಗೂ 22ರಂದು ಸಹ ಸಾರ್ವತ್ರಿಕ ರಜೆ ಇರಲಿದೆ.
ಮಾರ್ಚ್ 23ರಿಂದ 27ರವರೆಗೆ ವಿವಿಧ ಸರ್ಕಾರಿ ಹಾಗೂ ಖಾಸಗಿ ಕಾರ್ಯಕಲಾಪಗಳು ನಡೆಯಲಿದ್ದು, ಮುಂದಿನ ಕಾರ್ಯಕ್ರಮಗಳ ಬಗ್ಗೆ ಅಗತ್ಯವಿದ್ದಲ್ಲಿ ನಂತರ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
