ಶ್ಲೋಕ
ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ಇಲ್ಲಿ ನಾವು ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿಯಬೇಕು. ನಾವು ನಮ್ಮ ದೈನಂದಿನ ಜೀವನದಲ್ಲಿ ಗಣಹೋಮ, ನವಗ್ರಹಹೋಮ, ದೈವಾರಾಧನೆ, ಸಂಕಷ್ಟಿ, ಇತ್ಯಾದಿ ರೂಪದಲ್ಲಿ ಉಪಾಸನೆ ಮಾಡುತ್ತೇವೆ. ಇದು ತಪ್ಪೇ? ನಾವು ಗಣಪತಿ ಅಥವಾ ಇನ್ಯಾವುದೋ ಪ್ರತೀಕದಲ್ಲಿ ಭಗವಂತನ ಆರಾಧನೆ ಮಾಡಿದರೆ ನಮಗೆ ಮೋಕ್ಷ ಪ್ರಾಪ್ತಿ ಇಲ್ಲವೇ? ಯಾವುದು ಸರಿ, ಯಾವುದು ತಪ್ಪು? ಯಾವುದು ತ್ರೈವಿಧ್ಯಧರ್ಮ, ಯಾವುದು ಭಾಗವತ ಧರ್ಮ ?
ನಮ್ಮಲ್ಲಿ ಇಂದು ಭಾಗವತ ಧರ್ಮ ಕಣ್ಮರೆಯಾಗುತ್ತಿದೆ. ಯಾವುದೇ ಪ್ರತೀಕದ ಅಂತರ್ಯಾಮಿ ಭಗವಂತನ ಪೂಜೆ ತಪ್ಪಲ್ಲ. ಆದರೆ ಅದರ ಹಿಂದಿರುವ ನಮ್ಮ ಸಂಕಲ್ಪ ತಪ್ಪು. ಉದಾಹರಣೆಗೆ ನವಗ್ರಹ ಹೋಮ. ಒಂದು ವೇಳೆ ನಾವು ಯಾವ ಫಲ ಕಾಮನೆ ಇಲ್ಲದೆ, ಕೇವಲ ಮೋಕ್ಷ ಪ್ರಾಪ್ತಿಗಾಗಿ, ಸಕಲ ದೇವತಾಪರಿವಾರನಾದ, ನವಗ್ರಹ ಅಂತರ್ಗತ ನಾರಾಯಣ ಪ್ರೀತ್ಯರ್ಥ ನವಗ್ರಹ ಹೋಮ ಮಾಡಿದರೆ ಏನೂ ತಪ್ಪಿಲ್ಲ.
ಆದರೆ ಅಲ್ಲಿ ನಾವು ‘ನವಗ್ರಹ ಅಂತರ್ಗತ ನಾರಾಯಣ ಪ್ರಸನ್ನನಾಗಿ ಆ ಮೂಲಕ ನವಗ್ರಹ ದೋಷ ಪರಿಹಾರ ಮಾಡಲಿ’ ಎಂದು ಸಂಕಲ್ಪ ಮಾಡಿದಾಗ ಅದು ತ್ರೈವಿಧ್ಯ ಧರ್ಮವಾಗುತ್ತದೆ. ಸಂಕಲ್ಪ ಮಾಡುವಾಗ ಯಾವುದೇ ಕಾಮನೆ ಸೇರಿಸದೆ ಕೇವಲ ಭಗವದ್ ಪ್ರೀತ್ಯರ್ಥ ಎಂದು ಯಾವ ಕಾಮ್ಯ ಕರ್ಮ ಮಾಡಿದರೂ ಅದು ಭಾಗವತ ಧರ್ಮ. ಭಗವಂತ ಸುಪ್ರೀತನಾದರೆ ಎಲ್ಲವೂ ಸಿದ್ಧಿ. ಅವನು ಕೊಟ್ಟಿದ್ದನ್ನು ಸಂತೋಷವಾಗಿ ಭೋಗಿಸು, ಕೊಡದಿದ್ದನ್ನು ಬಯಸಬೇಡ. ನಿನಗೆ ಬಂದ ಕಷ್ಟ ನಿವಾರಣೆ ಮಾಡು ಎಂದು ಭಗವಂತನನ್ನು ಪೂಜಿಸಬೇಡ
ಬದಲಿಗೆ ಬಂದದ್ದನ್ನು ಪ್ರಸಾದವಾಗಿ ಸ್ವೀಕರಿಸು ಮತ್ತು ಜ್ಞಾನ ವೈರಾಗ್ಯ ಭಕ್ತಿ-ಮೋಕ್ಷ ಕೊಡು ಎಂದು ನಿರಂತರ ಭಗವಂತನನ್ನು ಪ್ರಾರ್ಥಿಸು. ನಿನ್ನ ರಕ್ಷಣೆಯ ಭಾರ ಆ ಭಗವಂತನದ್ದು. ಅದಕ್ಕಾಗಿ ನೀನು ತಲೆ ಕೆಡಿಸಿಕೊಳ್ಳಬೇಡ. ನಿನ್ನ ಜೀವನದಲ್ಲಿ ಏನು ನಡೆಯುತ್ತಿದೆ ಅದು ಆಕಸ್ಮಿಕವಲ್ಲ. ಅದು ಭಗವಂತನ ಇಚ್ಛೆ, ಅದರ ನಿವಾರಣೆಗಾಗಿ ನೀನು ಭಗವಂತನನ್ನು ಪೂಜಿಸುವುದಲ್ಲ ಬದಲಿಗೆ ಭಗವಂತನನ್ನು ಸೇರಲು ಭಗವಂತನನ್ನು ಪೂಜಿಸುವುದು. ಈ ರೀತಿ ನಾವು ನಮ್ಮ ಸಂಕಲ್ಪದ ಹಿಂದಿನ ಅನುಸಂಧಾನವನ್ನು ಬದಲಿಸಿಕೊಂಡಾಗ ಅದು ಭಾಗವತ ಧರ್ಮವಾಗುತ್ತದೆ. ಒಬ್ಬ ತ್ರೈವಿಧ್ಯ ತನ್ನ ಗುರುವಿಗೆ ‘ನನ್ನ ಗುರು’ ಎಂದು ನಮಸ್ಕಾರ ಮಾಡಿದರೆ ಭಾಗವತ ‘ಆ ಗುರುಗಳ ಒಳಗೆ ಭಗವಂತ ಕೂತು ನನಗೆ ಪಾಠ ಹೇಳುತ್ತಿದ್ದಾನೆ’ ಎಂದು ತಿಳಿದು ನಮಸ್ಕಾರ ಮಾಡುತ್ತಾನೆ. ಭಾಗವತ ತನ್ನೆಲ್ಲಾ ಕ್ರಿಯೆಯಲ್ಲಿ ಭಗವಂತನನ್ನು ಕಾಣುತ್ತಾನೆ. ಆತ ತನ್ನೆಲ್ಲಾ ಕ್ರಿಯಾ ಕರ್ಮದಲ್ಲಿ ಮೋಕ್ಷ ಮತ್ತು ಭಗವಂತನನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ.
ಆತನ ಪೂಜಾ ಸಂಕಲ್ಪದಲ್ಲಿ ಮೋಕ್ಷದ ಬಯಕೆಯನ್ನು ಬಿಟ್ಟು ಇನ್ಯಾವುದೇ ಬಯಕೆ ಇರುವುದಿಲ್ಲ. ನಾವು ಈ ಎತ್ತರಕ್ಕೇರುವುದು ಅಸಾಧ್ಯವಲ್ಲ. ಇದನ್ನು ಸಾಧ್ಯ ಮಾಡಲು ಪ್ರಯತ್ನ ಬೇಕು ಅಷ್ಟೇ. ನಾವು ಎಷ್ಟುಎಷ್ಟು ಭಗವತ್ ಪ್ರೀತ್ಯರ್ಥ ಕರ್ಮ ಮಾಡುತ್ತೇವೋ ಅಷ್ಟುಅಷ್ಟು ಹೆಚ್ಚು ಮೋಕ್ಷಕ್ಕೆ ಹತ್ತಿರವಾಗುತ್ತೇವೆ. ಭಗವಂತನಲ್ಲಿ ‘ನನಗೆ ಇದನ್ನು ಕೊಡು’ ಎಂದಾಗಾಲಿ ಅಥವಾ ‘ಇದನ್ನು ನಿವಾರಿಸು’ ಎಂದಾಗಲಿ ಎಂದೂ ಕೇಳಬೇಡ. ನಿನಗೆ ಏನು ಬೇಕು ಎನ್ನುವುದು ಭಗವಂತನಿಗೆ ಗೊತ್ತಿದೆ, ಅದನ್ನು ಭಗವಂತನಿಗೆ ಬಿಡು. ಕೇವಲ ಭಗವತ್ ಪ್ರೀತಿಗಾಗಿ, ಮೋಕ್ಷ ಸಾಧನೆಗಾಗಿ ಕರ್ಮ ಮಾಡು”. “ಇದು ಕೇವಲ ಭೀಮಸೇನ/ವಾಯುದೇವರಿಗೆ ಮಾತ್ರ” ಎಂದು ಪಲಾಯನ ವಾದ ಮಾಡದೆ ಯಾವುದೇ ಫಲ ಕಾಮನೆ ಇಲ್ಲದೆ ಪೂರ್ಣ ಭಕ್ತಿಯಿಂದ ಭಗವಂತನ ಪೂಜೆ ಮಾಡು. ಪೂಜೆಯಲ್ಲಿ ನಿನಗೆ ಬೇಡಲು ಇರುವ ಅಧಿಕಾರ ಕೇವಲ ‘ಮೋಕ್ಷ ಮತ್ತು ಭಗವಂತ’. ಅದನ್ನು ಪಡೆಯಲು ನಿನ್ನ ಸಾಧನೆಯನ್ನು ಮೀಸಲಿಡು. ಜೀವನದಲ್ಲಿ ಬರುವ ಏಳು ಬೀಳು ಎಲ್ಲವೂ ನಶ್ವರ, ಆ ಬಗ್ಗೆ ಯೋಚಿಸದೆ, ಸಂಸಾರದಿಂದ ಕಳಚಿಕೊಂಡು ಸಾವಿಲ್ಲದ ಮೋಕ್ಷವನ್ನು ಸೇರುವುದಕ್ಕಾಗಿ ಸಾಧನೆ ಮಾಡು. ಇದು ಇಲ್ಲಿರುವ ಮೂಲ ಸಂದೇಶ.
ಭಗವಂತನ ಪೂಜೆಗೆ ಬೇಕಾಗಿರುವುದು ಧನ-ಕನಕವಲ್ಲ. ಕೇವಲ ನಿಷ್ಕಾಮ ಭಕ್ತಿ. ಭಗವಂತನ ಪೂಜೆ ಎಷ್ಟು ಸುಲಭ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ:
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ॥೨೬॥
ಪತ್ರಮ್ ಪುಷ್ಪಮ್ ಫಲಮ್ ತೋಯಮ್ ಯಃ ಮೇ ಭಕ್ತ್ಯಾ ಪ್ರಯಚ್ಛತಿ ।
ತತ್ ಅಹಮ್ ಭಕ್ತಿ ಉಪಹೃತಮ್ ಅಶ್ನಾಮಿ ಪ್ರಯತ ಆತ್ಮನಃ –ಯಾರು ಎಲೆಯನ್ನೋ, ಹೂವನ್ನೋ, ನೀರನ್ನೋ ಭಕ್ತಿಯಿಂದ ನನಗೆ ನೀಡುತ್ತಾನೆ ನನ್ನಲ್ಲೇ ಬಗೆಯಿಟ್ಟ ಅವನ ಭಕ್ತಿಯ ಆ ಕೊಡುಗೆಯನ್ನು ನಾನು ನಲ್ಮೆಯಿಂದ ಕೊಳ್ಳುತ್ತೇನೆ.
ಮಹೋನ್ನತನಾದ ಭಗವಂತನ ಪೂಜೆಗೆ ಮೂಲವಾಗಿ ಬೇಕಾಗಿರುವುದು ‘ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಳ್ಳುವುದು(involvement)’, ಮತ್ತು ‘ಮನಸ್ಸು ತುಂಬಿ ಆರಾಧನೆ’ ಮಾಡುವುದು. ಮನಸ್ಸಿನಲ್ಲಿ ಭಕ್ತಿ ತುಂಬಿ ತುಳಸಿ ಪತ್ರೆಯನ್ನೋ, ಹೂವನ್ನೋ ಅರ್ಪಿಸಿದರೆ ಅದನ್ನು ಭಗವಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಇಲ್ಲಿ ಬಂಗಾರದ ಪೀಠವಾಗಲೀ, ಬೆಳ್ಳಿಯ ಹರಿವಾಣವಾಗಲಿ, ಪಂಚಪಾತ್ರೆಯಾಗಲಿ ಏನೂ ಬೇಡ. ಮನೆಯಲ್ಲಿ, ಮನೆ ತೋಟದಲ್ಲಿ ಏನಿದೆ ಅದನ್ನೇ ಅರ್ಪಿಸು. ಮನೆಯಲ್ಲಿ ಹಾಲಿಲ್ಲದಿದ್ದರೆ ಒಂದು ಲೋಟ ನೀರನ್ನು ಭಕ್ತಿಯಿಂದ ಅರ್ಪಿಸು. ಆದರೆ ಅದರ ಹಿಂದೆ ಭಾವ ಶುದ್ಧಿ ಇರಲಿ ಅಷ್ಟೇ. ಕೃಷ್ಣ ಹೇಳುತ್ತಾನೆ “ಯೋ ಮೇ ಭಕ್ತ್ಯಾ ಪ್ರಯಚ್ಛತಿ” ಎಂದು. ಭಗವಂತ ಬಯಸುವುದು ನಮ್ಮ ಅಂತರಂಗದ ಪ್ರೀತಿಯನ್ನು ಮತ್ತು ಹೃದಯವಂತಿಕೆಯನ್ನು ಹೊರತು ಹೊರಗಿನ ವೈಭವವನ್ನಲ್ಲ. “ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ”-“ನೀನು ಮನಸ್ಸನ್ನು ನನ್ನಲ್ಲಿ ನೆಲೆಗೊಳಿಸಿ, ಭಕ್ತಿಯಿಂದ ಏನು ಕೊಟ್ಟರೂ ಅದನ್ನು ನಾನು ಸ್ವೀಕರಿಸುತ್ತೇನೆ” ಎನ್ನುತ್ತಾನೆ ಕೃಷ್ಣ. ರಾಮಾಯಣದಲ್ಲಿ ಬರುವ ಶಬರಿಯ ಕಥೆ ಭಗವಂತನ ಈ ನುಡಿಗೆ ಒಂದು ದೃಷ್ಟಾಂತ.
