ಶ್ಲೋಕ – 27
ಯತ್ ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ ।
ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ ॥೨೭॥
ಕೌಂತೇಯ, ಏನು ಮಾಡುವೆ, ಏನು ತಿನ್ನುವೆ, ಏನು ಹೋಮಿಸುವೆ, ಏನು ನೀಡುವೆ, ಏನು ತಪಗೈವೆ ಅದನು ನನಗೆ ಒಪ್ಪಿಸು.
ಕೃಷ್ಣ ಹೇಳುತ್ತಾನೆ “ನನಗಾಗಿ ನೀನು ಏನನ್ನೂ ಮಾಡುವುದು ಬೇಡ ಆದರೆ ನಿನಗೋಸ್ಕರ ಏನು ಮಾಡುತ್ತೀಯೋ ಅದನ್ನು ನನಗೆ ಅರ್ಪಿಸು” ಎಂದು. ನಮ್ಮ ನಿತ್ಯ ಜೀವನದಲ್ಲಿ ಮಾಡಬೇಕಾದ ಅನೇಕ ಅನಿವಾರ್ಯ ವೃತ್ತಿ ಕಾರ್ಯಗಳಿರುತ್ತವೆ. ಜೀವನ ನಿರ್ವಹಣೆಯ ಕಾಯಕವಿರುತ್ತದೆ. ನಾವು ಅದನ್ನೇ ಭಗವಂತನ ಪೂಜೆ ಎಂದು ತಿಳಿದು ಮಾಡಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಧರ್ಮವ್ಯಾಧನ ಕಥೆ. ಮಾಂಸ ವಿಕ್ರಯ ಮಾಡಿ ಜೀವನ ಸಾಗಿಸುತ್ತಿದ್ದ ಆತನಲ್ಲಿ ಒಂದು ಸಂಕಲ್ಪ ಇತ್ತು. “ಮಾಂಸ ತಿನ್ನುವುದು ನನಗೆ ಆನುವಂಶೀಯವಾಗಿ ಬಂದ ಅಭ್ಯಾಸ. ಆದ್ದರಿಂದ ನಾನು ಮಾಂಸ ತಿನ್ನುತ್ತೇನೆ, ನನಗೆ ಬದುಕುವುದಕ್ಕೋಸ್ಕರ ಮತ್ತು ನನ್ನ ತಂದೆತಾಯಿಯನ್ನು ಸಾಕುವುದಕ್ಕೊಸ್ಕರ ನನ್ನ ಪಾಲಿಗೆ ಬಂದ ಈ ವೃತ್ತಿಯನ್ನು ನಾನು ಮಾಡುತ್ತೇನೆ. ಇದರಿಂದ ನನ್ನ ಬದುಕಿಗೆ ಬೇಕಾದಷ್ಟನ್ನು ಮಾತ್ರ ನಾನು ಗಳಿಸುತ್ತೇನೆ. ಎಂದೂ ವ್ಯವಹಾರದಲ್ಲಿ ಜನರ ಶೋಷಣೆ ಮಾಡುವುದಿಲ್ಲ” ಎಂದುಕೊಂಡು ಮಾಂಸ ವಿಕ್ರಯ ಮಾಡುತ್ತಿದ್ದ ಆತ. ಇದರಿಂದ ಆತನಿಗೆ ದೊಡ್ಡ ಜ್ಞಾನಿ ಧರ್ಮವ್ಯಾಧ ಎನ್ನುವ ಹೆಸರು ಬಂತು. ಋಷಿ ಮುನಿಗಳು ಆತನಿಂದ ಪಾಠ ಕಲಿಯುವ ಪ್ರಸಂಗ ಬಂತು. ಇದಕ್ಕೆ ಮೂಲ ಕಾರಣ ಆತ ತಾನು ಏನು ಮಾಡುತ್ತಿದ್ದನೋ ಅದನ್ನು ದೇವರ ಪೂಜೆ ಎಂದು ಮಾಡಿದ ಅಷ್ಟೇ. ಹೀಗೆ ಎಂದೂ ನಾವು ಮಾಡುವ ವೃತ್ತಿ ಮುಖ್ಯವಾಗುವುದಿಲ್ಲ, ಬದಲಿಗೆ ಅದನ್ನು ಭಗವಂತನ ಪೂಜೆ ಎಂದು ಮಾಡುವ ಅನುಸಂಧಾನ ಮುಖ್ಯವಾಗುತ್ತದೆ.
ನಿನ್ನ ನಿತ್ಯ ಕರ್ತವ್ಯ ಏನಿದೆ ಅದನ್ನು ಭಗವಂತನಿಗೆ ಅರ್ಪಿಸು. ಅದನ್ನು ಭಗವಂತನ ಪೂಜೆ ಎಂದು ಮಾಡು. ಭಗವಂತನಿಗಾಗಿ ಭಕ್ಷ್ಯ ಭೋಜ್ಯವನ್ನು ಮಾಡುವ ಅಗತ್ಯವಿಲ್ಲ. ನೀನು ಏನನ್ನು ತಿನ್ನುತ್ತೀಯೋ ಅದನ್ನು ಭಗವಂತನಿಗೆ ಅರ್ಪಿಸು. ಹೀಗೆ ಮಾಡಿದಾಗ ಭಗವಂತನ ಆರಾಧನೆ ಪ್ರತ್ಯೇಕವಾಗುವುದಿಲ್ಲ ಮತ್ತು ಕಷ್ಟವಾಗುವುದಿಲ್ಲ. ಭಗವಂತನಿಗಾಗಿ ಯಾವುದೋ ವಿಶೇಷ ಹೋಮ ಹವನ ಮಾಡುವ ಅಗತ್ಯವಿಲ್ಲ. ನೀನು ಏನು ಹೋಮ ಮಾಡುತ್ತೀಯೋ ಅದನ್ನೇ ‘ಅಗ್ನಿ ಅಂತರ್ಗತ ನಾರಾಯಣಾಯ ಇದಮ್ ನ ಮಮ’ ಎಂದು ಅರ್ಪಿಸು. ಒಬ್ಬ ಹಸಿದ ವ್ಯಕ್ತಿ ಆತನ ಹೊಟ್ಟೆಯಲ್ಲಿ ವೈಶ್ವಾನರ ರೂಪಿ ಭಗವಂತನನ್ನು ಹೊತ್ತು ಬಂದಿದ್ದಾನೆ ಎಂದು ತಿಳಿದು ಆತನೊಳಗಿರುವ ವೈಶ್ವಾನರ ಪ್ರಸನ್ನನಾಗಲಿ ಎಂದು ಆ ವ್ಯಕ್ತಿಯನ್ನು ಸತ್ಕಾರ ಮಾಡು. ಇದೇ ಭಗವಂತನ ಮಹಾ ಪೂಜೆ ಎನಿಸುತ್ತದೆ.
ಕೃಷ್ಣ ಹೇಳುತ್ತಾನೆ “ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್” ಎಂದು. ಇಲ್ಲಿ ತಪಸ್ಸು ಎಂದರೆ ‘ಚಿಂತನೆ’ ಅಥವಾ ವೃತಾನುಷ್ಟಾನ. ಉದಾಹರಣೆಗೆ ‘ಸಂಕಷ್ಟಿ’- ಅದನ್ನು ಆಚರಿಸುವಾಗ ಗಣಪತಿ ಅಂತರ್ಗತನಾದ ಭಗವಂತನಿಗೆ ಅರ್ಪಿತವಾಗಲಿ ಎಂದು ಮಾಡು. ಅಲ್ಲಿ ಯಾವುದೇ ಫಲಾಪೇಕ್ಷೆ ಅಹಂಕಾರ ಇಟ್ಟುಕೊಳ್ಳಬೇಡ. ಹೀಗೆ ಯಾವ ಆಚರಣೆಯೂ ಕೂಡಾ ಅಂತತಃ ಪರಮ ಪುರುಷನಾದ ಭಗವಂತನಿಗೆ ಅರ್ಪಿತ ಎಂದು ತಿಳಿದು ಮಾಡಿದಾಗ ಅದು ನಿಜವಾದ ತಪಸ್ಸಾಗುತ್ತದೆ. ಇಲ್ಲಿ ಅರ್ಜುನನಿಗೆ “ನಿನ್ನ ಕರ್ತವ್ಯ ಕರ್ಮವಾಗಿ ಬಂದಿರುವ ಈ ಯುದ್ಧವನ್ನೂ ಕೂಡಾ ಭಗವಂತನ ಪೂಜೆಯಾಗಿ ಮಾಡು” ಎನ್ನುವ ಸಂದೇಶವನ್ನು ಈ ಶ್ಲೋಕದ ಮೂಲಕ ಕೃಷ್ಣ ನೀಡಿದ್ದಾನೆ.
