ಚನ್ನರಾಯಪಟ್ಟಣ: ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸಾಧನೆ ಮಾಡಿದ ವಿದ್ಯಾರ್ಥಿ ಪ್ರಜ್ವಲ್ ಕೆ. ಗೌಡ ಅವರನ್ನು ಮಂಗಳೂರು ಪಿಯು ಕಾಲೇಜು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಚನ್ನರಾಯಪಟ್ಟಣ ಪಟ್ಟಣದ ಮಂಗಳೂರು ಪಿಯು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಮಾತನಾಡಿ, ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣನಾದ ಪ್ರಜ್ವಲ್ ನಮ್ಮ ಕಾಲೇಜು ಹಾಗೂ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾನೆ. ಈ ವಿದ್ಯಾರ್ಥಿ ಹಾಸನ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದು, ಚನ್ನರಾಯಪಟ್ಟಣ ತಾಲೂಕಿಗೆ ಪ್ರಥಮ ಸ್ಥಾನ ತಂದುಕೊಟ್ಟಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಿ ಪೋಷಕರಿಗೂ ಉಪನ್ಯಾಸಕರಿಗೂ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿ ಪ್ರಜ್ವಲ್ ಮಾತನಾಡಿ, ನನ್ನ ಸಾಧನೆಗೆ ಎಲ್ಲಾ ರೀತಿಯ ಮಾರ್ಗದರ್ಶನ ನೀಡಿದ ಪೋಷಕರಿಗೂ ಹಾಗೂ ಉಪನ್ಯಾಸಕರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಆರ್. ಏಕಾಂತ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿ ಕೆ. ಪ್ರಜ್ವಲ್ ಅವರು ಜಿಲ್ಲೆಗೆ ಹೆಮ್ಮೆ ತಂದಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಿ.ಎಸ್. ಪ್ರದೀಪ್, ಪ್ರಾಂಶುಪಾಲ ಆರ್. ಏಕಾಂತ, ಉಪನ್ಯಾಸಕರಾದ ಯೋಗೇಶ್, ಮನು, ವರ್ಷಿತ್, ಪೂಜಾ, ನವೀದಾ ಬಾನು, ಭಲ್ಲೇಶ್, ಕೃತಿಕಾ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ.
