
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಆಹಾ ನನ್ನ ಮದ್ವೆಯಂತೆ …. !!!
ಆಗ ನಮ್ಮೂರಿನಲ್ಲಿ ಶುಂಠಿ ಕೃಷಿಯ ಭರಾಟೆ ಜೋರಾಗಿತ್ತು. ಭತ್ತದ ಗದ್ದೆಗಳೆಲ್ಲವೂ ಶುಂಠಿಮಯವಾಗಿದ್ದವು. ಭತ್ತದ ಗದ್ದೆಗಳನ್ನೇ ನಂಬಿ ಬದುಕುತ್ತಿದ್ದ ನೂರಾರು ನವಿಲುಗಳು ಸ್ವ್ವಾಭಾವಿಕ ಆಹಾರವಿಲ್ಲದೆ, ಬೇರೆ ಪರ್ಯಾಯ ಆಹಾರ ಹುಡುಕುತ್ತಾ ಎಲ್ಲೆಲ್ಲೋ ಸುತ್ತಿ ಶಿಕಾರಿಯವರ ಕರುಳು ಸೇರಿದವು. ಇದನ್ನು ಸೂ ವಾಗಿ ಗಮನಿಸಿದ ತೇಜಸ್ವಿ “ಧನಂಜಯ, ನಾಳೆ ಶನಿವಾರ ಸಂಜೆ ನಾಲ್ಕಕ್ಕೆ ನೇಚರ್ ಕ್ಲಬ್ನವರನ್ನೆಲ್ಲ ಬರೋದಿಕ್ಕೆ ಹೇಳು. ಬೆಳವಾಡಿ ಆಫೀಸ್ನಲ್ಲಿ ಮೀಟಿಂಗ್ ಸೇರಿ, ನವಿಲುಗಳ ಬಗ್ಗೆ ಡಿಸ್ಕಷನ್ ಮಾಡೋಣ” ಎಂದರು.
ಪ್ರದೀಪ್ ಕೆಂಜಿಗೆ, ಬೆಳವಾಡಿ, ಡಾ. ಮೋಹನ್ಕುಮಾರ್, ಡಾ. ವಿಷ್ಣುಮೂರ್ತಿ, ಸುರೇಂದ್ರನಾಥ್, ಗಿರೀಶ್, ತೇಜಸ್ವಿಯವರು ಮತ್ತು ನಾನು ಸೇರಿ ಚರ್ಚೆ ಮಾಡಿ, ಮಳೆಗಾಲ ಶುರುವಾಗುವವರೆಗೆ ನವಿಲುಗಳಿಗೆ, ಆಯ್ದ ಸ್ಥಳಗಳಲ್ಲಿ ಭತ್ತವನ್ನು ಎರಚಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಲು ನಿರ್ಧರಿಸಿದೆವು.
ಐದು-ಆರು ತಿಂಗಳಲ್ಲಿ ನಾವು ನಿರೀಕ್ಷಿಸಿದ ಫಲಿತಾಂಶ ದೊರಕತೊಡಗಿತು.. ನೋಡನೋಡುತ್ತಿದ್ದಂತೆ ನವಿಲುಗಳ ಸಂಖ್ಯೆ ವೃದ್ಧಿಸಿತ್ತು. ಪ್ರಕೃತಿಯ ಸಹಜ ಕ್ರಿಯೆಗೆ ಹೆಗಲು ನೀಡಿದ ಸಂತೃಪ್ತ ಭಾವನೆ ನಮ್ಮೆಲ್ಲರನ್ನೂ ಮೂಡಿತ್ತು.
“ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಈ ನವಿಲುಗಳ ಸಂಖ್ಯೆ ಹೆಚ್ಚಾಗುತ್ತಿವೆ ಅಲ್ವೇನಯ್ಯಾ? ಗಮನಿಸಿದ್ದೀಯಾ? ಅದು ಸರ್ಕಾರದ ಪರಿಸರ ಕಾಳಜಿಯಿಂದಲ್ಲ, ನವಿಲನ್ನು ದೇವರ ವಾಹನವೆಂದು ಪೂಜಿಸ್ತಾರಲ್ಲಾ ಹಾಗಾಗಿ ಕೊಂದು ತಿನ್ನುವವರೂ ಹೆದರುತ್ತಿದ್ದಾರೆ. ಆದುದರಿಂದ ಎಲ್ಲೋ ಉಳಿದಿದ್ದ ಒಂದೆರೆಡು ನವಿಲುಗಳು ಮೊಟ್ಟೆ ಇಟ್ಟು, ಮರಿ ಮಾಡಿ ಪಾಪುಲೇಶನ್ ಜಾಸ್ತಿಮಾಡಿಕೊಂಡಿವೆ. ಇವುಗಳ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚಾದರೂ ಅಪಾಯವೇ ಜೊತೆಗೆ ಇರಬೇಕಾದುದಕ್ಕಿಂದ ಕಡಿಮೆಯಾದ್ರೂ ಅನಾಹುತ ತಪ್ಪಿದ್ದಲ್ಲ. ಎಲ್ಲಾ ಒಂದು ಬ್ಯಾಲೆನ್ಸ್ನಲ್ಲಿಯೇ ನಡಿಬೇಕು.” ಎಂದಿದ್ದರು.
ಒಂದು ದಿನ ಬ್ಯಾಂಕಿಗೆ ಬಂದವರೇ “ನಿನಗೆಷ್ಟಯ್ಯಾ ವಯಸು”್ಸ ಎಂದರು.
“೨೮ ವರ್ಷ”
“ ಮದುವೆಯಾಗುವ ಯೋಚನೆ ಇದೆಯಾ?” (ಯಾರಿಗೆ ಬೇಡ ಹೇಳಿ?)
ಕೇಳಿದ ಕೂಡಲೇ ಹೂಂ ಎಂದರೆ ಸರಿಯಾಗಲ್ಲ ಎಂದುಕೊಂಡು ಆ ಊ ಎಂದು “ಒಳ್ಳೆ ಸಂಬಂಧ ಆದ್ರೆ ಯೋಚನೆ ಮಾಡೋಣ ಸರ್” ಎಂದೆ.
“ಯೋಚನೆ ಮಾಡ್ತಾನಂತೆ ಯೋಚನೆ! ಇರೂ ಮಾಡ್ತೀನಿ ನಿನಗೆ” ಎಂದವರೇ ಸೀದಾ ಎದ್ದು ಹೊರಟರು.
ಯಾರ ಮದುವೆಗೂ ವಿಶೇಷವಾಗಿ ಹೋಗದ, ತಾನೇ ಮಂತ್ರಮಾಗಲ್ಯ ಮಾದರಿಯಲ್ಲಿ ಸರಳವಾಗಿ ವಿವಾಹವಾಗಿದ್ದ ತೇಜಸ್ವಿ, ನನಗೆ ಮದುವೆ ಮಾಡಿಸುವ ಮಾತನ್ನು ಕೇಳಿ ನನಗೆ ಸೋಜಿಗವೆನಿಸಿತ್ತು. ಕೆಲ ದಿನಗಳ ನಂತರ ಒಂದು ಹುಡುಗಿಯನ್ನು ಸೂಚಿಸಿದರೂ ಕಾರಣಾಂತರಗಳಿಂದ ಅದು ಕೈಗೂಡಲಿಲ್ಲ. ಮುಂದೆ ನನಗೆ ಬೇರೆಡೆ ಮದುವೆ ನಿಗದಿಯಾಯಿತು. ಹಾಸನದಲ್ಲಿ ನಡೆದ ನನ್ನ ಮದುವೆಗೆ ತೇಜಸ್ವಿಯವರ ಮಡದಿ ಶ್ರೀಮತಿ ರಾಜೇಶ್ವರಿಯವರು ತಮ್ಮ ಗೆಳತಿಯವರಾದ ಶ್ರೀಮತಿ ಪದ್ಮಾಶ್ರೀರಾಮ್ರವರೊಡನೆ ಬಂದು ಆಶೀರ್ವದಿಸಿ ಶುಭ ಹಾರೈಸಿದರು.
ನನಗೆ ಉಡುಗೊರೆಯಾಗಿ ಕುವೆಂಪು ವಿರಚಿತ “ಮಲೆಗಳಲ್ಲಿ ಮದುಮಗಳು” ಮತ್ತು “ಚಂದ್ರಮಂಚಕೆ ಬಾ ಚಕೋರಿ” ಪುಸ್ತಕಗಳನ್ನು ನೀಡಿದ್ದು ಇಂದಿಗೂ ನೆನಪಿನಲ್ಲಿ ಹಸಿರಾಗಿದೆ. ಕೆಲ ದಿನಗಳ ನಂತರ ತೇಜಸ್ವಿಯವರು ತಮ್ಮ ಪತ್ನಿಯವರೊಡನೆ ನಮ್ಮ ಮನೆಗೇ ಬಂದು ನಮ್ಮನ್ನು ಹರಸಿ ಹೋದದ್ದು ನನ್ನ ಬದುಕಿನ ಅವಿಸ್ಮರಣೀಯ ಘಟನೆ.
ಮುಂದುವರೆಯುತ್ತದೆ…