ರಾಮನಾಥಪುರ: ಕೇರಳಾಪುರ ಗ್ರಾಮದಲ್ಲಿರುವ ಶ್ರೀ ಪ್ರಸನ್ನ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಮಹಾ ರಥೋತ್ಸವದ ಹಿನ್ನೆಲೆಯಲ್ಲಿ ಸುಮಾರು 30 ಅಡಿ ಎತ್ತರದ ರಥವನ್ನು ಭಕ್ತರು ಭಕ್ತಿಭಾವದಿಂದ ಸಕಲ ಸಿದ್ಧತೆಗಳೊಂದಿಗೆ ಸಜ್ಜುಗೊಳಿಸುತ್ತಿದ್ದಾರೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಾವೇರಿ ನದಿ ತಟದಲ್ಲಿರುವ ರಾಮನಾಥಪುರ ಹೋಬಳಿಯ ಕೇರಳಾಪುರದಲ್ಲಿ ಫೆಬ್ರವರಿ 26ರಂದು ಗುರುವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಶ್ರೀ ಪ್ರಸನ್ನ ವೀರಭದ್ರೇಶ್ವರಸ್ವಾಮಿ ಮಹಾ ರಥೋತ್ಸವವು ಅದ್ದೂರಿಯಾಗಿ ಜರುಗಲಿದೆ.
ಈಗಾಗಲೇ ಎರಡು ದಿನಗಳಿಂದ ಪ್ರತಿದಿನ ಬೆಳಿಗ್ಗೆ-ಸಂಜೆ ಬೆಳ್ಳಿ ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಪೂಜಾಕೈಂಕರ್ಯಗಳು ಆರಂಭಗೊಂಡಿವೆ. ಒಂದು ವಾರಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸಿಹಿ ತಿಂಡಿಗಳ ಅಂಗಡಿಗಳು ನಿರ್ಮಾಣವಾಗುತ್ತಿದ್ದು, ತಿನಿಸು ತಯಾರಿಕೆಯಲ್ಲಿ ವ್ಯಾಪಾರಸ್ಥರು ತಲ್ಲೀನರಾಗಿದ್ದಾರೆ. ರಸ್ತೆಯ ಬದಿಗಳಲ್ಲೂ ವಿವಿಧ ವ್ಯಾಪಾರ ಮಳಿಗೆಗಳು ನಿರ್ಮಾಣವಾಗುತ್ತಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳ ಆಟೋಪಕರಣಗಳ ಅಂಗಡಿಗಳು ಕೂಡ ಸಿದ್ಧಗೊಳ್ಳುತ್ತಿವೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಶಾಸಕರಾದ ಎ. ಮಂಜು, ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ, ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ, ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್, ನಿವೃತ್ತ ಅಬಕಾರಿ ಆಯುಕ್ತರಾದ ಎಚ್.ಪಿ. ಈರಪ್ಪ, ತಹಸೀಲ್ದಾರ್ ಕೆ.ಸಿ. ಸೌಮ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಜಾತ್ರಾ ಮಹೋತ್ಸವ ಸಮಿತಿಯವರಾದ ಕೆ.ಎಸ್. ಪರಮೇಶ್ವರಯ್ಯ, ಬಿ. ಶಾಂತವೀರಪ್ಪ, ಕೆ.ಎಸ್. ಮಹದೇವಪ್ಪ, ಕೆ.ಎ. ರವಿ, ಸಂಗಮೇಶ್ ತಿಳಿಸಿದ್ದಾರೆ.
— ಶರಣ. ಎಂ.ಎನ್. ಕುಮಾರಸ್ವಾಮಿ, ಲೇಖಕರು, ರಾಮನಾಥಪುರ, ಹಾಸನ ಜಿಲ್ಲೆ.
