ಹಾಸನ: ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾವನ್ನು ಸಿಬ್ಬಂದಿಯಿಂದಲೇ ಬೇರೆ ದಿಕ್ಕಿಗೆ ತಿರುಗಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಮಹಾನಗರ ಪಾಲಿಕೆಯ ಒಳಾಂಗಣದಲ್ಲಿ ನಡೆಯುತ್ತಿರುವ ಕಾರ್ಯಪದ್ಧತಿ ಬಗ್ಗೆ ಅನುಮಾನಗಳು ಮೂಡಿವೆ.
ನಗರದ ಕಚೇರಿಯಲ್ಲಿ ಇಂಜಿನಿಯರ್ ಒಬ್ಬರು ತಮ್ಮ ಅಧೀನ ಸಿಬ್ಬಂದಿಗೆ “ನಿನ್ನೆ ತೆಗೆದು ಹಾಕೋಕೆ ಹೇಳಿದ್ದೆ, ಮುರಿದು ಹಾಕು… ಇಲ್ಲಿ ಯಾವನು ಹೇಳಿದ್ದು ಸಿಸಿಟಿವಿ ಕ್ಯಾಮರಾ ಹಾಕೋಕೆ” ಎಂದು ದರ್ಪದಿಂದ ಮಾತನಾಡುತ್ತಿರುವ ವಿಡಿಯೋ ಇದೀಗ ಲಭ್ಯವಾಗಿದ್ದು ಚರ್ಚೆಗೆ ಕಾರಣವಾಗಿದೆ.
ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರ ಸೂಚನೆಯಂತೆ ಕಚೇರಿಗಳಲ್ಲಿ ಭ್ರಷ್ಟಾಚಾರ ನಿಗ್ರಹದ ಉದ್ದೇಶದಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲಾಗಿತ್ತು. ಆದರೆ ಕಾರ್ಯನಿರ್ವಹಿಸುತ್ತಿದ್ದ ಕ್ಯಾಮೆರಾವನ್ನು ಸಿಬ್ಬಂದಿಯೊಬ್ಬರು ಬೇರೆ ದಿಕ್ಕಿಗೆ ತಿರುಗಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಪಾಲಿಕೆಯ ಒಳಗೆ ಏನು ನಡೆಯುತ್ತಿದೆ? ಕ್ಯಾಮೆರಾ ದಿಕ್ಕು ಬದಲಾವಣೆಯ ಹಿಂದೆ ಉದ್ದೇಶ ಏನು? ಯಾರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಯಿತು? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ಕುರಿತು ಮೇಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೊಣೆಗಾರಿಕೆ ನಿಶ್ಚಯಿಸುವಂತೆ ಒತ್ತಾಯ ಕೇಳಿಬಂದಿದೆ.
