ಬೆಂಗಳೂರು: ರಾಜ್ಯದ ಜನತೆಗೆ ಬೆಲೆ ಏರಿಕೆ ನಡುವೆಯೇ ಮತ್ತೊಂದು ಆರ್ಥಿಕ ಹೊರೆ ಎದುರಾಗುವ ಸಾಧ್ಯತೆ ಕಾಣಿಸುತ್ತಿದೆ. ರಾಜ್ಯ ಸರ್ಕಾರವು ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರ (ಗೈಡೆನ್ಸ್ ವ್ಯಾಲ್ಯೂ) ಪರಿಷ್ಕರಣೆಗೆ ಸಿದ್ಧತೆ ನಡೆಸಿದ್ದು, ಏಪ್ರಿಲ್ ತಿಂಗಳಿಂದ ಹೊಸ ದರ ಜಾರಿಗೆ ಬರಬಹುದು ಎಂದು ತಿಳಿದುಬಂದಿದೆ. ಇದರಿಂದ ಆಸ್ತಿ ಖರೀದಿ ಮತ್ತಷ್ಟು ದುಬಾರಿಯಾಗುವ ಆತಂಕ ವ್ಯಕ್ತವಾಗಿದೆ.
ಕಳೆದ ವರ್ಷ ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನು ಹೆಚ್ಚಿಸಿದ್ದ ಸರ್ಕಾರ ಈಗ ಮಾರುಕಟ್ಟೆ ದರದ ಆಧಾರದ ಮೇಲೆ ಮಾರ್ಗಸೂಚಿ ದರವನ್ನು ಹೆಚ್ಚಿಸಲು ಮುಂದಾಗಿದೆ. ಈ ಸಂಬಂಧ ಈಗಾಗಲೇ ಉನ್ನತ ಮಟ್ಟದ ಸಭೆ ನಡೆದಿದ್ದು, ಮಾರ್ಗಸೂಚಿ ದರವನ್ನು ಶೇ.10ರಿಂದ ಶೇ.15ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
2025ರ ಆಗಸ್ಟ್ 31ರಂದು ಸರ್ಕಾರ ಆಸ್ತಿ ನೋಂದಣಿ ಶುಲ್ಕವನ್ನು ಶೇ.1ರಿಂದ ಶೇ.2ಕ್ಕೆ ಹೆಚ್ಚಳ ಮಾಡಿತ್ತು. ಇದರಿಂದ ಮುದ್ರಾಂಕ ಶುಲ್ಕ ಶೇ.5.6ರವರೆಗೆ ಏರಿಕೆಯಾಗಿದ್ದು, ಹೆಚ್ಚಿದ ನೋಂದಣಿ ಶುಲ್ಕ ಸೇರಿ ಆಸ್ತಿ ನೋಂದಣಿಯ ವೇಳೆ ಒಟ್ಟು ಶೇ.7.6ರಷ್ಟು ಶುಲ್ಕವನ್ನು ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ಖರೀದಿದಾರರು ಮಾರುಕಟ್ಟೆ ಮೌಲ್ಯದ ಬದಲು ಮಾರ್ಗಸೂಚಿ ದರದ ಆಧಾರದ ಮೇಲೆ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಪಾವತಿಸುವುದರಿಂದ ಈಗ ಮಾರ್ಗಸೂಚಿ ದರವೇ ಹೆಚ್ಚಾದರೆ ಖರ್ಚು ಮತ್ತಷ್ಟು ಏರಿಕೆಯಾಗಲಿದೆ. ಏಪ್ರಿಲ್ನಿಂದ ಹೊಸ ದರ ಜಾರಿಗೆ ಬಂದರೆ ಮನೆ, ಜಾಗ ಖರೀದಿಸುವವರಿಗೆ ಹೆಚ್ಚುವರಿ ಆರ್ಥಿಕ ಭಾರ ಬೀಳಲಿದೆ ಎಂದು ರಿಯಲ್ ಎಸ್ಟೇಟ್ ವಲಯದ ಮೂಲಗಳು ತಿಳಿಸಿವೆ.
ಇದರೊಂದಿಗೆ ಈಗಾಗಲೇ ದುಬಾರಿ ಜೀವನ ವೆಚ್ಚವನ್ನು ಎದುರಿಸುತ್ತಿರುವ ಜನತೆಗೆ ಮತ್ತೊಂದು ಆರ್ಥಿಕ ಹೊರೆ ಸೇರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆ ಜೋರಾಗಿದೆ. ಸರ್ಕಾರ ಅಧಿಕೃತ ಆದೇಶ ಹೊರಡಿಸಿದ ಬಳಿಕವೇ ಅಂತಿಮ ಪ್ರಮಾಣ ತಿಳಿಯಲಿದೆ.
